ಜಿಲ್ಲೆ

ಟೆಂಪೋ ಡಿಕ್ಕಿಯಾಗಿ ಬೈಕ್ ಸವಾರ ಮೃತ್ಯು

Dakshina Kannada

ಉಪ್ಪಿನಂಗಡಿ: ಗೋಳಿತೊಟ್ಟು ಸಮೀಪದ ಸಣ್ಣಂಪಾಡಿ ಎಂಬಲ್ಲಿ ಮಂಗಳವಾರ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ಅತಿ ವೇಗದಿಂದ ಬಂದ ಟೆಂಪೋ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟು, ಸಹ ಸವಾರ ಗಾಯಗೊಂಡಿದ್ದಾರೆ.

ಮಂಗಳೂರಿನ ಶಕ್ತಿನಗರ ಕುಂಟಲ್ಪಾಡಿ ಪದವು ನಿವಾಸಿ ಸಚಿನ್(29) ಮೃತಪಟ್ಟವರು. ಇವರೊಂದಿಗೆ ಪ್ರಯಾಣಿಸುತ್ತಿದ್ದ ಬೆಳ್ತಂಗಡಿ ನಿವಾಸಿ ಅಂಕಿತ್ ಗಾಯಗೊಂಡಿದ್ದು, ಅವರನ್ನು ಪುತ್ತೂರು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನೆಲ್ಯಾಡಿ ಕಡೆಯಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಮೀನು ಸಾಗಾಟದ ಟೆಂಪೋವನ್ನು ಚಾಲಕ ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ್ದು, ಉಪ್ಪಿನಂಗಡಿ ಕಡೆಯಿಂದ ನೆಲ್ಯಾಡಿ ಕಡೆ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ.

ದ್ವಿಚಕ್ರ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು, ಸಚಿನ್ ತಲೆ ಮೇಲೆ ಟೆಂಪೋದ ಚಕ್ರಗಳು ಹರಿದು ಅವರು ಸ್ಥಳದಲ್ಲೇ ಮೃತಪಟ್ಟರು. ಟೆಂಪೋ ಹೆದ್ದಾರಿ ಬದಿಯ ತೋಡಿಗೆ ಇಳಿದಿದೆ. ಪುತ್ತೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.