ಚಿಕ್ಕಬಳ್ಳಾಪುರ: ಅಪಘಾತ ವಿಮೆ ವಿವಾದ ಪ್ರಕರಣವನ್ನು ಇತ್ಯರ್ಥಪಡಿಸಿರುವ ಜಿಲ್ಲಾ ಗ್ರಾ ಹಕರ ಆಯೋಗವು ಸಂತ್ರಸ್ತನಿಗೆ ಪರಿಹಾರ ನೀಡಲು ಕಂಪನಿಗೆ ಸೂಚಿಸಿದೆ. ಚಿಂತಾಮಣಿ ತಾಲೂಕಿನ ವಂಗಿಮಾಲು ಗ್ರಾಮದ ಆಂಜಿನಪ್ಪಗೆ 10 ಲಕ್ಷ ರೂ. ಪರಿಹಾರವನ್ನು ಬಡ್ಡಿ ಸಮೇತ ನೀಡಲು ಸೂಚಿಸಿದೆ. ಆಂಜಿನಪ್ಪ ಮಗ ವಿ.ಎ. ಕುಮಾರ್ 2020ನೇ ಸಾಲಿನ ಅ.2ರಂದು ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟಿದ್ದರು. ಇದಕ್ಕೂ ಮೊದಲು ಕುಮಾರ್ ಕರ್ನಾಟಕ ಬ್ಯಾಂಕ್ ಮೂಲಕ ಯೂನಿವರ್ಸಲ್ ಸೊಂಪು ಜನರಲ್ ಇನ್ಶುರೆನ್ಸ್ ಕಂಪನಿಯ ಗ್ರೂಪ್ ಆಕ್ಸಿಡೆಂಟ್ ವಿಮಾ ಪಾಲಿಸಿ ತೆಗೆದುಕೊಂಡಿದ್ದರು. ಮಗ ವಿದ್ಯುತ್ ಅಪಘಾತದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಆಂಜಿನಪ್ಪ ವಿಮೆ ಕಂಪನಿಗೆ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಸಂಬಂಧಪಟ್ಟ ಸಂಸ್ಥೆಯು ಪರಿಹಾರ ನೀಡಲು ನಿರಾಕರಿಸಿದ್ದು ಈ ಬಗ್ಗೆ ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ವಿಚಾರಣೆ ಕೈಗೊಂಡ ಗ್ರಾಹಕರ ಆಯೋಗವು, ವಿಮಾ ಕಂಪನಿ ಸೇವಾ ನ್ಯೂನ್ಯತೆ ಎಸಗಿರುವುದು ಕಂಡುಬಂದಿದ್ದು, ಇದಕ್ಕೆ ನಿಯಮಾನುಸಾರವಾಗಿ ವಿಮಾ ಮೊತ್ತ 10 ಲಕ್ಷ ರೂ. ಪರಿಹಾರ ಮತ್ತು ಶೇ.8ರ ಬಡ್ಡಿ ಹಣವನ್ನು ನೀಡಲು ಆದೇಶಿಸಿದೆ. ಗ್ರಾಹಕನಿಗೆ ನ್ಯಾಯ ದೊರಕಿಸಿ ಕೊಟ್ಟು ಪ್ರಕರಣವನ್ನು ಇತ್ಯರ್ಥಪಡಿಸಿದೆ ಎಂದು ಚಿಕ್ಕಬಳ್ಳಾಪುರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರು ತಿಳಿಸಿದ್ದಾರೆ.