ಜಿಲ್ಲೆ

ಹೆದ್ದಾರಿಯಲ್ಲಿ ಹೆಚ್ಚುತ್ತಿದೆ ಅಪಘಾತ

Dakshina Kannada

ಮಂಗಳೂರು: ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆಯಾಗಿದ್ದರೂ, ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣವಿಲ್ಲ!

ರಾಷ್ಟ್ರೀಯ ಹೆದ್ದಾರಿ, ನಗರದೊಳಗಿನ ರಸ್ತೆ, ಗ್ರಾಮೀಣ ರಸ್ತೆಗಳಲ್ಲೂ ಅತಿ ವೇದ ಸಂಚಾರ ಕಂಡುಬರುತ್ತಿದೆ. ಮಿತಿಮೀರಿದ ವೇಗದಿಂದ ವಾಹನ ಚಲಾಯಿಸಿ ಈಗಾಗಲೇ ಹಲವು ಅಪಘಾತಗಳು ಸಂಭವಿಸಿ, ಜೀವಹಾನಿಯೂ ಸಂಭವಿಸಿದೆ. ರಸ್ತೆಯಲ್ಲಿ ವಾಹನಗಳು ಕಡಿಮೆ ಇರುವ ಕಾರಣಕ್ಕೆ ವೇಗವನ್ನು ಹೆಚ್ಚಿಸಿ ಚಲಾಯಿಸುತ್ತಿದ್ದಾರೆ. ಅನಂತರ ನಿಯಂತ್ರಣ ಕಳೆದುಕೊಂಡು ಅವಘಡಗಳು ಸಂಭವಿಸುತ್ತವೆ. ನಗರದ ಪಡೀಲ್, ಪಂಪ್‌ವೆಲ್ ಫ್ಲೈಓವರ್, ಅಡ್ಯಾರ್ ಬಳಿ ಸಂಭವಿಸಿದ್ದ ಅಪಘಾತಗಳಿಗೂ ಇದುವೇ ಕಾರಣ. ಇನ್ನೊಂದೆಡೆ ಸಂಚಾರ ನಿಯಮ ಉಲ್ಲಂಘಿಸುವ ಪ್ರಕರಣಗಳೂ ಹೆಚ್ಚುತ್ತಿವೆ. ದ್ವಿಚಕ್ರ ವಾಹನಗಳಲ್ಲಿ ತ್ರಿಬಲ್ ರೈಡ್, ಹೆಲ್ಮೆಟ್ ಇಲ್ಲದೆ ಓಡಾಟ ಹೆಚ್ಚಾಗಿದೆ. ಅಚ್ಚರಿಯ ಸಂಗತಿ ಎಂದರೆ, ಇದನ್ನು ಕೇಳುವವರೇ ಇಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ.

ನಗರ ಪ್ರದೇಶಗಳಲ್ಲಿ ಬ್ಯಾರಿಕೇಡ್: ವಾಹನಗಳ ಸಂಚಾರ ಕಡಿಮೆ ಇರುವ ಕಾರಣ, ನಗರದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ. ನಗರಕ್ಕೆ ತುರ್ತು ಸಂದರ್ಭ ಬರುವವರಿಗೆ ಇದರಿಂದ ಗೊಂದಲ ಉಂಟಾಗುತ್ತದೆ. ಮುಖ್ಯ ರಸ್ತೆಯ ಒಂದು ಭಾಗದಲ್ಲಿ ಬ್ಯಾರಿಕೇಡ್ ಇಟ್ಟು ಒಂದೇ ಭಾಗದಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಕೆಲವೆಡೆ ಸವಾರರು ಬ್ಯಾರಿಕೇಡ್ ಬದಿಗೆ ಸರಿಸಿ ವಾಹನ ಚಲಾಯಿಸಿಕೊಂಡು ಹೋಗುವ ಉದಾಹರಣೆಗಳೂ ಇವೆ.

ಸಾಯಂಕಾಲ ದಟ್ಟಣೆ: ಬೆಳಗ್ಗೆ 10ರವರೆಗೆ ವಾಹನಗಳ ಓಡಾಟ ಹೆಚ್ಚಿರುತ್ತವೆ. ಬಳಿಕ ಸ್ವಲ್ಪ ಕಡಿಮೆಯಾಗುತ್ತದೆ. ಸಾಯಂಕಾಲ 5 ಗಂಟೆಗೆ ವಾಹನಗಳ ಸಂಖ್ಯೆ ಹೆಚ್ಚಿ, ರಾತ್ರಿ 8ರವರೆಗೂ ಇದೇ ಪರಿಸ್ಥಿತಿ ಇರುತ್ತದೆ. ಮುಖ್ಯವಾಗಿ ಪೊಲೀಸರು ಇಲ್ಲದ ರಸ್ತೆಗಳಲ್ಲೇ ದಟ್ಟಣೆ ಇರುತ್ತದೆ. ಆಹಾರ ಪದಾರ್ಥಗಳ ಡೆಲಿವರಿ ಮಾಡುವ ದ್ವಿಚಕ್ರ ವಾಹನ ಸವಾರರೂ ಮಿತಿ ಮೀರಿದ ವೇಗದಲ್ಲಿ ಸಂಚರಿಸುತ್ತಿದ್ದಾರೆ.

ಅಂಡರ್‌ಪಾಸ್‌ನಲ್ಲಿ ಬೆಳಕಿಲ್ಲ: ಪಡೀಲ್ ಅಂಡರ್‌ಪಾಸ್ ರಸ್ತೆಯಲ್ಲಿ ರಾತ್ರಿ ವೇಳೆ ಬೆಳಕು ಇಲ್ಲದೆ ಸಂಚರಿಸುವುದು ಕಷ್ಟವಾಗಿದೆ. ಬೆಳಕಿನ ಅಭಾವದಿಂದ ಅಪಘಾತ ಸಂಭವಿಸುವ ಸಾಧ್ಯತೆಯೂ ಹೆಚ್ಚಿದೆ. ನಸುಕಿನ ವೇಳೆ ಈ ರಸ್ತೆ ದಾಟಿ ಮಂಗಳೂರಿಗೆ ಬರುವವರೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಇಲ್ಲಿ ಬೆಳಕು ಅವಶ್ಯವಾಗಿ ಬೇಕಿದೆ. ಇತ್ತೀಚೆಗೆ ನಸುಕಿನ ವೇಳೆ ಬೈಕ್‌ವೊಂದು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿತ್ತು. ಆದ್ದರಿಂದ ಇಲ್ಲಿ ಸೂಕ್ತ ಬೆಳಕಿನ ವ್ಯವಸ್ಥೆ ಮಾಡಿಕೊಡಲು ಜನ ಆಗ್ರಹಿಸಿದ್ದಾರೆ.

ಲಾಕ್‌ಡೌನ್ ಹಿನ್ನೆಲೆಯಲ್ಲಿ ನಗರದಲ್ಲಿ ಅಗತ್ಯ ಸೇವೆ ಹಾಗೂ ತುರ್ತು ಸಂದರ್ಭ ಮಾತ್ರ ಸಂಚಾರಕ್ಕೆ ಅವಕಾಶ. ಕೆಲವು ಮುಖ್ಯ ರಸ್ತೆಗಳಲ್ಲಿ ಏಕಮುಖ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ವೇಗದ ಚಾಲನೆ, ಹೆಲ್ಮೆಟ್ ಧರಿಸದಿರುವುದು, ಸೀಟ್‌ಬೆಲ್ಟ್ ಹಾಕದಿರುವುದು ಮೊದಲಾದ ಸಂಚಾರ ನಿಯಮ ಉಲ್ಲಂಘನೆ ಕುರಿತು ಸಿಸಿಟಿವಿ ಮೂಲಕ ನಿಗಾ ವಹಿಸಲಾಗುತ್ತಿದೆ.

ಶಶಿಕುಮಾರ್ ಎನ್.

ಮಂಗಳೂರು ಸಿಟಿ ಪೊಲೀಸ್ ಕಮಿಷನರ್