ಜಿಲ್ಲೆ

ಕರ್ತವ್ಯ ನಿರತ ಪೇದೆಗೆ ಬೈಕ್‌ನಲ್ಲಿ ಡಿಕ್ಕಿ ಹೊಡೆದ ಸವಾರರ ವಿರುದ್ಧ ಕೊಲೆ ಯತ್ನ ಕೇಸ್

ಬೆಂಗಳೂರು : ರಾತ್ರಿ ವಾಹನ ತಪಾಸಣೆ ಕರ್ತವ್ಯದಲ್ಲಿ ನಿರತರಾಗಿದ್ದ ಪೊಲೀಸ್ ಕಾನ್‌ಸ್ಟೇಬಲ್‌ಗೆ ಬೈಕ್ ಸವಾರು ಡಿಕ್ಕಿ ಹೊಡೆದು ಪರಾರಿ ಆಗಿದ್ದಾರೆ. ಬಸವನಗುಡಿ ಠಾಣೆ ಕಾನ್‌ಸ್ಟೇಬಲ್ ಮೌನೇಶ್, ಹಲ್ಲೆಗೆ ಒಳಗಾದವರು.

ಡಿ.17ರ ರಾತ್ರಿ ಪೇದೆ ಮೌನೇಶ್, ಹೋಂ ಗಾರ್ಡ್ ಮಹಮ್ಮದ್ ಅಜರ್ ಮತ್ತು ಮಂಜುನಾಥ್ ಜತೆ ವಾಣಿವಿಲಾಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ರಾತ್ರಿ 11.20ರಲ್ಲಿ ಹೋಂಡಾ ಆಕ್ವೀವಾದಲ್ಲಿ ಅತೀ ವೇಗವಾಗಿ ಬರುತ್ತಿದ್ದ ಸವಾರರನ್ನು ತಡೆಯಲು ಪೊಲೀಸ್ ಮುಂದಾಗಿದ್ದು, ನಿಲ್ಲಿಸುವಂತೆ ನಿಧಾನ ಮಾಡಿ ಹತ್ತಿರ ಬಂದ ಮೇಲೆ ವೇಗವಾಗಿ ತೆರಳಿದ್ದಾರೆ.

ಇವರ ಹಿಂದೆ ಪಲ್ಸರ್ ಬೈಕ್‌ನಲ್ಲಿ ಬಂದ ಮತ್ತಿಬ್ಬರು ಸವಾರರು, ಏಕಾಏಕಿ ಪೇದೆ ಮೌನೇಶ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಎಡಗಾಲಿಗೆ ಗಾಯವಾಗಿ ಸ್ಥಳದಲ್ಲಿ ಕುಸಿದು ಬಿದ್ದ ಮೌನೇಶ್‌ನನ್ನು ಹೋಂ ಗಾರ್ಡ್‌ಗಳು ಆಸ್ಪತ್ರೆಗೆ ದಾಖಲಿಸಿದ್ದು, ಹಾಸ್ಮಟ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿಗಳ ವಿರುದ್ಧ ಕೊಲೆ ಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಆರೋಪದ ಮೇಲೆ ಪ್ರಕರಣ ದಾಖಲಿಸಿ ಆರೋಪಿಗಳ ಬಂಧನಕ್ಕೆ ಬಲೆಬೀಸಿರುವುದಾಗಿ ಬಸವನಗುಡಿ ಪೊಲೀಸರು ತಿಳಿಸಿದ್ದಾರೆ.