ಜಿಲ್ಲೆ

ಜಿಲ್ಲೆಯಲ್ಲಿ 40 ಅಪಘಾತ ವಲಯ ಗುರುತು

ಜಗನ್ನಾಥ್ ಕಾಳೇನಹಳ್ಳಿ

ತುಮಕೂರು: ರಸ್ತೆ ಅಪಘಾತಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 40 ಸ್ಥಳಗಳನ್ನು ಅಪಘಾತ ವಲಯಗಳೆಂದು ಗುರುತಿಸಲಾಗಿದ್ದು, ಅಗತ್ಯವಿರುವ ಕಡೆ ರಸ್ತೆ ಉಬ್ಬು ಹಾಗೂ ತಡೆ ಸೇರಿದಂತೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭಕಲ್ಯಾಣ್​ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ರಸ್ತೆ ಸುರಕ್ಷತಾ ಸಭೆ ನಡೆಸಿ ಮಾತನಾಡಿದ ಅವರು, ಆಗಸ್ಟ್​ 8 ರೊಳಗಾಗಿ ರಸ್ತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ವಿಭಾಗದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪದೇ ಪದೇ ರಸ್ತೆ ಅಪಘಾತಗಳು ಸಂಭವಿಸಿ ಜನರು ಪ್ರಾಣ ಕಳೆದುಕೊಳ್ಳುತ್ತಿರುವ ಅಪಾಯಕಾರಿ ರಸ್ತೆಗಳಲ್ಲಿ ಪೊಲೀಸ್​ ಇಲಾಖೆಯಿಂದ ಈಗಾಗಲೇ 40 ಬ್ಲಾಕ್​ ಸ್ಪಾಟ್​ಗಳನ್ನು ಗುರುತಿಸಲಾಗಿದೆ. ಗುರುತಿಸಲಾಗಿರುವ ಸ್ಥಳಗಳಲ್ಲಿ ಈವರೆಗೂ ಲೋಕೋಪಯೋಗಿ ಇಲಾಖೆ ಹಾಗೂ ಪಂಚಾಯತ್​ ರಾಜ್​ ಇಂಜಿನಿಯರಿಂಗ್​ ವಿಭಾಗದ ಇಂಜಿನಿಯರ್​ಗಳು ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲವೆಂದು ಅಸಮಧಾನ ವ್ಯಕ್ತಪಡಿಸಿದರು.

ಅವೈಜ್ಞಾನಿಕ ಸ್ಪೀಡ್​ ಬ್ರೇಕರ್​ ನಿಮಾರ್ಣದಿಂದ ಹಾಗೂ ರಸ್ತೆ ಮಾರ್ಗಸೂಚಿಗಳಿಲ್ಲದೆ ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿವೆ. ಸ್ಪೀಡ್​ ಬ್ರೇಕರ್​ಗಳನ್ನು ವೈಜ್ಞಾನಿಕವಾಗಿ ನಿರ್ಮಿಸಬೇಕು. ರಸ್ತೆ ಮಾರ್ಗಸೂಚಿಗಳನ್ನು ಅಳವಡಿಸಬೇಕು. ಅಗತ್ಯ ದಾಖಲೆಗಳಿಲ್ಲದೆ ರಸ್ತೆಗಳಲ್ಲಿ ಸಂಚರಿಸುವ ಶಾಲಾ ವಾಹನ ಸೇರಿದಂತೆ ಎಲ್ಲಾ ವಾಹನ ಹಾಗೂ ಚಾಲಕರ ಪರವಾನಗಿಗಳನ್ನು ಪರಿಶೀಲಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪಾಲಿಕೆ ಆಯುಕ್ತೆ ಬಿ.ವಿ.ಅಶ್ವಿಜ, ಹೆಚ್ಚುವರಿ ಪೊಲೀಸ್​ ಅಧೀಕ್ಷಕ ಸಿ.ಗೋಪಾಲ್​ ಹಾಗೂ ಪುರುಷೋತ್ತಮ್​, ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಸಾದ್​ ಇದ್ದರು.

ಸಭೆ ನಂತರ ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ ಚಿಕ್ಕಹಳ್ಳಿ, ಹಿರೇಹಳ್ಳಿ ಟಿವಿಎಸ್​ ಕ್ರಾಸ್​, ಪಂಡಿತನಹಳ್ಳಿ ಗೇಟ್​ ಮತ್ತು ಕ್ಯಾತಸಂದ್ರ ಟೋಲ್​ ಬಳಿ ಗುರುತಿಸಲಾಗಿರುವ ಬ್ಲಾಕ್​ ಸ್ಪಾಟ್​ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.