ಕೆ.ಆರ್.ಪೇಟೆ: ಪಟ್ಟಣದ ಸಾಹುಕಾರ್ ಚಿಕ್ಕಣ್ಣಗೌಡರ ಸಮಯದಾಯ ಭವನದ ಮುಂಭಾಗ ಸಾರಿಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಾಲೂಕಿನ ಸಾಸಲು ಕೊಪ್ಪಲು ಗ್ರಾಮದ ಕುಮಾರ್ (48) ಮೃತ. ತಾಲೂಕಿನ ಸಾಸಲು ಗ್ರಾಮದಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಕುಮಾರ್ ಬಂದಿದ್ದರು. ಈ ವೇಳೆ ಸಮುದಾಯ ಭವನಕ್ಕೆ ಹೋಗಲು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಬಸ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಬಸಕ್ಕೆ ಕುಮಾರ್ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರಕುಮಾರ್ ಅಂತಿಮ ದರ್ಶನ ಪಡೆದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅಲ್ಲದೆ ತಾತ್ಕಾಲಿಕ ಪರಿಹಾರವಾಗಿ 25 ಸಾವಿರ ರೂ. ನೀಡುತ್ತಿರುವ ಬಗ್ಗೆ ಮಾಹಿತಿ ಪಡೆದುಕೊಂಡು, ಜಿಲ್ಲಾ ಸಾರಿಗೆ ಅಧಿಕಾರಿಗಳೊಂದಿಗೆ ದೂರವಾಣಿ ಕರೆ ಮಾಡಿ ಮಾತನಾಡಿದರು. ಮೃತ ವ್ಯಕ್ತಿಯ ಕುಟುಂಬವು ಬಡತನದ ಜೀವನ ನಡೆಸುತ್ತಿರುವ ಕಾರಣ ತಾತ್ಕಾಲಿಕ ಪರಿಹಾರವಾಗಿ 50 ಸಾವಿರ ರೂಪಾಯಿಗಳನ್ನು ಮಾನವೀಯ ನೆಲೆಗಟ್ಡಿನಲ್ಲಿ ನೀಡುವಂತೆ ಮನವಿ ಮಾಡಿದರು. ಈ ಮನವಿಗೆ ಸಾರಿಗೆ ಅಧಿಕಾರಿಗಳು ಸ್ಪಂದಿಸಿ 50 ಸಾವಿರ ರೂ. ನೀಡಿದರು. ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್ ಮೃತ ಕುಮಾರ್ ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಆರ್ಥಿಕ ನೆರವು ನೀಡಿ ಸಾಂತ್ವನ ಹೇಳಿದರು.
ನಂತರ ಸ್ವಗ್ರಾಮದಲ್ಲಿ ಮೃತ ಕುಮಾರ್ ಅಂತ್ಯಕ್ರಿಯೆ ನಡೆಯಿತು. ಘಟನೆ ಕುರಿತು ಕೆ.ಆರ್.ಪೇಟೆ ಟೌನ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.