ವಿಜಯವಾಣಿ ಸುದ್ದಿಜಾಲ ನೆಲಮಂಗಲ
ರಾಷ್ಟ್ರೀಯ ಹೆದ್ದಾರಿ 75ರ ಮಲ್ಲರಬಾಣವಾಡಿ ಕ್ರಾಸ್ ಬಳಿ ಶನಿವಾರ ಆಟೋ ಹಾಗೂ ಕೆಸ್ಸಾರ್ಟಿಸಿ ಬಸ್ ನಡುವಿನ ಅಪಘಾತದಲ್ಲಿ ಅಟೋದಲ್ಲಿದ್ದ ಮೂವರು ಮೃತಪಟ್ಟಿದ್ದಾರೆ. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ತಾಲೂಕಿನ ಶಾಂತಿನಗರ ನಿವಾಸಿ ಶ್ರೀನಿವಾಸ್(45) ಬೆಂಗಳೂರಿನ ಯಶವಂತಪುರದ ಪುಟ್ಟನಂಜಮ್ಮ(58), ವರ್ಷಿಣಿ(13) ಮೃತರು.
ಯೂ ಟರ್ನ್ ವೇಳೆ ಡಿಕ್ಕಿ: ಎರಡು ದಿನಗಳ ಹಿಂದೆ ಶುಭ ಕಾರ್ಯಕ್ರಮವೊಂದಕ್ಕೆ ಬೆಂಗಳೂರಿಗೆ ಬಂದಿದ್ದ ಇವರು ಶನಿವಾರ ಶಾಂತಿನಗರದಿಂದ ನೆಲಮಂಗಲಕ್ಕೆ ಆಟೋದಲ್ಲಿ ತೆರಳುತ್ತಿದ್ದರು. ಮಲ್ಲರಬಾಣರವಾಡಿ ಕ್ರಾಸ್ ಬಳಿ ಆಟೋ ಚಾಲಕ ಯೂಟರ್ನ್ ತೆಗೆದುಕೊಳ್ಳುತ್ತಿದ್ದ ವೇಳೆ ಬೆಂಗಳೂರಿನಿಂದ ಹೊರನಾಡಿಗೆ ತೆರಳುತ್ತಿದ್ದ ಕೆಸ್ಸಾರ್ಟಿಸಿ ಬಸ್ ಡಿಕ್ಕಿ ಹೊಡೆದಿದೆ, ಆಟೋ ಚಾಲಕ ಶ್ರೀನಿವಾಸ್ ಮತ್ತು ಪುಟ್ಟನಂಜಮ್ಮ ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. ಚಿಕಿತ್ಸೆ ಲಕಾರಿಯಾಗದೆ ಆಸ್ಪತ್ರೆಯಲ್ಲಿ ವರ್ಷಿಣಿ ಕೊನೆಯುಸಿರೆಳೆದಿದ್ದಾಳೆ.
ಕುಟುಂಬಸ್ಥರ ಆಕ್ರಂದನ: ಎರಡು ದಿನಗ ಹಿಂದಷ್ಟೇ ಶಾಂತಿನಗರದಲ್ಲಿ ಪುಷ್ಪಾರತಿ ಕಾರ್ಯಕ್ರಮ ಮಾಡಿಕೊಂಡಿದ್ದ ಬಾಲಕಿ ವರ್ಷಿಣಿ ಮೃತಪಟ್ಟ ಹಿನ್ನೆಲೆಯಲ್ಲಿ ಕುಟುಂಬಸ್ಥರು ಆಕ್ರಂದನ ಮುಗಿಲುಮುಟ್ಟಿತ್ತು. ಒಂದೇ ಕುಟುಂಬದ ಮೂವರ ಸಾವಿನ ದೃಶ್ಯ ಕಂಡು ಸಂಬಂಧಿಕರು ಕಣ್ಣೀರು ಸುರಿಸಿದರು.ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಶ್ರೀನಿವಾಸ್ ಮೃತಪಟ್ಟ ಹಿನ್ನಲೆ ಯಂಟಗಾನಹಳ್ಳಿ ಗ್ರಾಮ ಪಂಚಾಯಿತಿ ಅದ್ಯಕ್ಷ ರಾಹುಲ್‌ಗೌಡ, ಸದಸ್ಯ ಡಿ.ಚಿಕ್ಕಣ್ಣ, ಮಹಂತೇಶ್, ಮಂಜುನಾಥಯ್ಯ ಸೇರಿ ಹಲವರು ಅಂತಿಮ ದರ್ಶನ ಪಡೆದು ಕುಟುಂಬದವರಿಗೆ ಸಾಂತ್ವಾನ ಹೇಳಿದರು.