ಜಿಲ್ಲೆ

ಬಸ್‌ಗೆ ಆಟೋ ಡಿಕ್ಕಿಯಾಗಿ ಇಬ್ಬರು ಸಾವು - ಓವರ್‌ಟೇಕ್ ಮಾಡುವಾಗ ಹತೋಟಿ ತಪ್ಪಿ ಘಟನೆ - ಮೂವರಿಗೆ ಗಾಯ

Mangaluru - Nishantha Narayana

ಪುತ್ತೂರು: ಮಾಣಿ-ಮೈಸೂರು ಹೆದ್ದಾರಿಯ ಮಂಜಳಪಡ್ಪು ಪೆಟ್ರೋಲ್ ಪಂಪ್ ಬಳಿ ಇನ್ನೊಂದು ವಾಹನವನ್ನು ಹಿಂದಿಕ್ಕುವ ಭರದಲ್ಲಿ ಆಟೋ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಮುಂದಿನಿಂದ ಬಂದ ಕೆಎಸ್ಸಾರ್ಟಿಸಿ ಬಸ್‌ಗೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟು ಮೂವರು ಗಾಯಗೊಂಡಿದ್ದಾರೆ.

ಕುಂಬ್ರ ಸನ್ಯಾಸಿ ಗುಡ್ಡ ಸಮೀಪದ ಘಟ್ಟ ನಿವಾಸಿ ಆಟೋ ಚಾಲಕ ಮೇಸ್ತ್ರಿ ಮಹಮ್ಮದ್ ಅವರ ಪತ್ನಿ ಜಮೀಲ(೫೦), ಮೊಮ್ಮಗ ತಬ್ಸೀರ್(೪.೫) ಮೃತಪಟ್ಟಿದ್ದಾರೆ. ಚಾಲಕ ಮೇಸಿ ಮಹಮ್ಮದ್, ಬುಲ್ಕಿಸ್(೫೦), ಅವರ ಪುತ್ರ ಮಹಮ್ಮದ್ ಝಹೀರ್(೩.೫) ಗಾಯಗೊಂಡಿದ್ದಾರೆ. ಎಲ್ಲರೂ ಒಂದೇ ಕುಟುಂಬಕ್ಕೆ ಸೇರಿದವರು.

ಮಂಗಳೂರಿಗೆ ಬಟ್ಟೆ ಖರೀದಿಸುವುದಕ್ಕೆ ಹೋದ ಕುಟುಂಬ ಹಿಂದಿರುಗಿ ಬರುತ್ತಿದ್ದ ಸಂದರ್ಭ ಮಂಜಳಪಡ್ಪಿನಲ್ಲಿ ಇನ್ನೊಂದು ಆಟೋವನ್ನು ಹಿಂದಿಕ್ಕುವ ಸಂದರ್ಭ ಮುಂಭಾಗದಲ್ಲಿ ಬಿ.ಸಿ.ರೋಡ್ ಕಡೆ ಬಸ್ ಬರುವುದನ್ನು ಕಂಡು ಚಾಲಕ ತಬ್ಬಿಬ್ಬಾಗಿದ್ದಾನೆ. ಆಟೋ ತಿರುಗಿಸಲು ಯತ್ನಿಸಿದಾಗ ಪಲ್ಟಿಯಾಗಿ ಬಸ್‌ನ ಮುಂಭಾಗಕ್ಕೆ ಬಡಿದಿದೆ. ತಕ್ಷಣ ಸ್ಥಳದಲ್ಲಿದ್ದವರು ಐವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಬ್ಬರು ಮೃತಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.