ಜಿಲ್ಲೆ

ಕಾರು ಕಂದಕಕ್ಕುರುಳಿ ಐವರಿಗೆ ಗಾಯ - ಬಾಲಕನ ಸಮಯ ಪ್ರಜ್ಞೆಯಿಂದ ಪಾರು

Mangaluru - Nishantha Narayana

ಪುತ್ತೂರು: ಉಪ್ಪಿನಂಗಡಿ - ಪುತ್ತೂರು ಹೆದ್ದಾರಿಯ ಸೇಡಿಯಾಪು ಕಾಪುವಿನಲ್ಲಿ ರಸ್ತೆಯಂಚಿನ ಕಂದಕಕ್ಕೆ ಕಾರೊಂದು ಉರುಳಿ ಜಖಂಗೊಂಡಿದೆ. ಕಾರಿನಲ್ಲಿದ್ದ ೧೦ ವರ್ಷದ ಬಾಲಕನ ಸಮಯ ಪ್ರಜ್ಞೆಯಿಂದ ಕಾರಿನಲ್ಲಿದ್ದ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉಜಿರೆಯ ಪಾರ ನಿವಾಸಿ ಚರಣ್ ಎಂಬುವರು ಕಾರನ್ನು ಚಾಲನೆ ಮಾಡಿದ್ದು, ಚರಣ್ ಅವರ ತಂದೆ, ಬಾವ ಹಾಗೂ ಇಬ್ಬರು ಮಕ್ಕಳು ಪ್ರಯಾಣಿಸುತ್ತಿದ್ದರು. ಮುಂಡೂರಿನಲ್ಲಿ ನಡೆಯುತ್ತಿದ್ದ ಒತ್ತೆಕೋಲದಲ್ಲಿ ಭಾಗವಹಿಸಿ ಮನೆಗೆ ಹಿಂತಿರುಗುವ ಸಂದರ್ಭ ಘಟನೆ ನಡೆದಿದೆ.

ನಿದ್ದೆ ಮಂಪರಿನಿಂದಾಗಿ ಕಾರು ನಿಯಂತ್ರಣ ತಪ್ಪಿ ೧೦ ಆಡಿ ಆಳದ ಕಂದಕಕ್ಕೆ ಉರುಳಿದೆ ಎಂದು ಹೇಳಲಾಗಿದೆ. ಕಾರಿನಲ್ಲಿದ್ದ ಚರಣ್ ಅವರ ಅಕ್ಕನ ಮಗ ೫ನೇ ತರಗತಿಯ ವನೀಶ್ ಸಮಯ ಪ್ರಜ್ಞೆ ಮೆರೆದು, ಕಾರಿನಿಂದ ತೆವಳಿಕೊಂಡು ಮೇಲೆ ಹೋಗಿ ಕಾರಿನ ಡೋರ್ ತೆಗೆದು ಹೊರ ಬಂದಿದ್ದಾನೆ. ಕಂದಕದಿಂದ ಮೇಲೆ ರಸ್ತೆಗೆ ಬಂದು ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನವನ್ನು ನಿಲ್ಲಿಸಿ ಅವರ ಸಹಾಯ ಪಡೆದು ಕಾರಿನಲ್ಲಿದ್ದವರನ್ನು ಮೇಲಕ್ಕೆತ್ತಲು ಸಹಾಯ ಕೇಳಿದ್ದಾನೆ. ಅವರ ಸಹಾಯದಿಂದ ಕಾರಿನಲ್ಲಿದ್ದವರನ್ನು ರಕ್ಷಿಸಲಾಗಿದ್ದು ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಐವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.