ಜಿಲ್ಲೆ

ಲಾರಿ ಉರುಳಿ ಕಾಫಿ ಬೀಜ ನೀರುಪಾಲು

ಅರಕಲಗೂಡು : ಪಟ್ಟಣ ಹೊರ ಭಾಗದ ಹಾಸನ ರಸ್ತೆ ಅಂಕನಾಯಕನಹಳ್ಳಿ ಗ್ರಾಮದ ಬಳಿ ಸೋಮವಾರ ರಾತ್ರಿ ಲಾರಿ ಕೆರೆಗೆ ಉರುಳಿ ಬಿದ್ದು ಕಾಫಿ ಚೀಲಗಳು ನೀರು ಪಾಲಾಗಿವೆ.
ಕೊಡಗಿನ ವಿರಾಜಪೇಟೆ ತಾಲೂಕು ಶ್ರೀಮಂಗಳದಿಂದ ಕಾಫಿ ಬೀಜವನ್ನು ಹಾಸನದ ಕಾಫಿ ಕ್ಯೂರಿಂಗ್ ವರ್ಕ್ಸ್ ಗೆ ಸೋಮವಾರ ರಾತ್ರಿ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಕೆರೆಗೆ ಉರುಳಿತು. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಮೂಟೆಗಳು ನೀರಿಗೆ ಬಿದ್ದು ಲಕ್ಷಾಂತರ ರೂ ಬೆಲೆಯ ಕಾಫಿ ಬೀಜ ಹಾನಿಗೊಳಗಾಗಿದೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಂಡಿದ್ದಾರೆ.
ಆಕ್ರೋಶ: ಅರಕಲಗೂಡು- ಹಾಸನ ರಸ್ತೆಯ ಅಂಕನಾಯಕನಹಳ್ಳಿ ಗ್ರಾಮದ ಮಗೆಕೆರೆ ತಿರುವು ರಸ್ತೆಯನ್ನು ನೇರಗೊಳಿಸದೆ ಕೆಆರ್‌ಡಿಸಿಎಲ್ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಿದೆ. ಹಾಗಾಗಿ ಇಲ್ಲಿ ಪದೇ, ಪದೇ ಅಪಘಾತಗಳು ಸಂಭವಿಸುತ್ತಿವೆ. ವಾಹನ ಚಾಲಕರು, ಪಾದಚಾರಿಗಳು ಪ್ರಾಣ ಕಳೆದು ಕೊಳ್ಳುತ್ತಿದ್ದಾರೆ ಎಂದು ಈ ಭಾಗದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲತಿಂಗಳ ಹಿಂದೆ ಇದೇ ಸ್ಥಳದಲ್ಲಿ ಬೈಕ್ ಅಪಘಾತಕ್ಕೊಳಗಾಗಿ ಚಾಲಕರೊಬ್ಬರು ಮೃತಪಟ್ಟಿದ್ದ ವೇಳೆ ಪ್ರತಿಭಟನೆ ನಡೆಸಿ ರಸ್ತೆ ಬಂದ್ ಮಾಡಲಾಗಿತ್ತು. ಆದರೂ ಈವರೆಗೆ ರಸ್ತೆ ಸರಿಪಡಿಸಿಲ್ಲ ಎಂದು ಸ್ಥಳೀಯರು ಕಿಡಿಕಾರಿದರು. ರಸ್ತೆ ದುರಸ್ತಿ ಪಡಿಸದಿದ್ದರೆ ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಸಾರ್ವಜನಿಕರು ಎಚ್ಚರಿಸಿದ್ದಾರೆ.