ಶಿವಮೊಗ್ಗ: ಉದ್ಯೋಗ, ದೇವಸ್ಥಾನಕ್ಕೆ ಅನುದಾನ ಮಂಜೂರು, ರಸ್ತೆ ಡಾಂಬರೀಕರಣ ಸೇರಿ ಹತ್ತು ಹಲವು ಸಮಸ್ಯೆಗಳಿಗೆ ಸಂಬಂಧಿಸಿ ಸಾರ್ವಜನಿಕರು ಉಸ್ತುವಾರಿ ಸಚಿವರ ಕಚೇರಿಯಲ್ಲಿ ಮಧು ಬಂಗಾರಪ್ಪ ಅವರಿಗೆ ಸೋಮವಾರ ಅಹವಾಲು ಸಲ್ಲಿಸಿದರು. ನಂತರ ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಟ್ಯಾಕ್ಸಿಗಳಿಗೆ ಜಿಪಿಎಸ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ಅಳವಡಿಕೆ ಮಾಡಬೇಕೆಂಬ ಆದೇಶವನ್ನು ರದ್ದುಪಡಿಸುವಂತೆ ಶಿವಮೊಗ್ಗ-ಭದ್ರಾವತಿ ಮೀಟರ್ ಟ್ಯಾಕ್ಸಿ ಅಸೋಸಿಯೇಷನ್ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿದರು.
ಜಿಪಿಎಸ್ ಅಳವಡಿಸದಿದ್ದಲ್ಲಿ ಆರ್‌ಟಿಒ ಕಚೇರಿಯಿಂದ ಎಫ್‌ಸಿ ಮಾಡಿಸಲು ಬರಲ್ಲ. ಆದರೆ ಈ ವ್ಯವಸ್ಥೆ ಅಳವಡಿಕೆಯಿಂದ ಟ್ಯಾಕ್ಸಿ ನಡೆಸುವವರಿಗೆ ಅಧಿಕ ಖರ್ಚು ಬರುತ್ತದೆ. ಟ್ಯಾಕ್ಸಿಗಳು ಶಿವಮೊಗ್ಗ-ಭದ್ರಾವತಿ ನಡುವೆ ಕಾರ್ಯಾಚರಣೆ ಮಾಡುತ್ತಿರುವ ಕಾರಣ ಮತ್ತು ಅಧಿಕ ಖರ್ಚು ಆಗುವುದರಿಂದ ಸದರಿ ವ್ಯವಸ್ಥೆ ರದ್ದುಪಡಿಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಪ್ರಿಯಾಂಕ ಬಡಾವಣೆ ನಿವಾಸಿಗಳ ಹಿತರಕ್ಷಣಾ ವೇದಿಕೆ ಸದಸ್ಯರು ಬಡಾವಣೆಯಲ್ಲಿ ಉದ್ದ ಮತ್ತು ಅಡ್ಡ ರಸ್ತೆಗೆ ಹೊಸದಾಗಿ ಡಾಂಬರೀಕರಣ ಮಾಡಿಸಿಕೊಡಬೇಕು ಎಂದು ಮನವಿ ಮಾಡಿದರು. ಜಿಲ್ಲಾ ತೆಲುಗು ಅರುಂಧತಿ ಆದಿಕರ್ನಾಟಕ ಸಮಾಜದ ಪದಾಧಿಕಾರಿಗಳು ನಗರದ 27ನೇ ವಾರ್ಡ್ ಮಿಳಘಟ್ಟ ವ್ಯಾಪ್ತಿಯಲ್ಲಿ ಅರ್ಧಕ್ಕೆ ನಿಲ್ಲಿಸಿರುವ ಡಾ. ಬಿ.ಆರ್.ಅಂಬೇಡ್ಕರ್ ಸಮುದಾಯ ಭವನವನ್ನು ಪೂರ್ಣಗೊಳಿಸಲು 50 ಲಕ್ಷ ರೂ. ಅನುದಾನ ಮಂಜೂರು ಮಾಡಬೇಕೆಂದು ಕೋರಿದರು.
ಬನಶಂಕರಿ ಬಡಾವಣೆಯ ಶ್ರೀ ಆಂಜನೇಯ ಸಮಿತಿ ಪದಾಧಿಕಾರಿಗಳು ದೇವಸ್ಥಾನ ನಿರ್ಮಿಸಲು ಅನುದಾನ ನೀಡುವಂತೆ ಕೋರಿದರು. ಉದ್ಯೋಗ ಒದಗಿಸುವಂತೆ ಕೋರಿ ಇಬ್ಬರು ಮಹಿಳೆಯರು ಅರ್ಜಿ ನೀಡಿದರು.