ಕಡೂರು: ತುರುವನಹಳ್ಳಿ-ತಮ್ಮಟದಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 176ರ ಅಗಲೀಕರಣ ಕಾಮಗಾರಿಯ ಭೂಸ್ವಾಧೀನ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಲಾಯಿತು. ಭೂಮಿ ಕಳೆದುಕೊಳ್ಳುವ ರೈತರಿಂದ ಅರ್ಜಿಗಳನ್ನು ಸ್ವೀಕರಿಸಲಾಯಿತು.
ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರಕ್ಕಾಗಿ ಮಚ್ಚೇರಿ ಬೆಂಕಿ ಲಕ್ಷ್ಮಯ್ಯ ಸಭಾಂಗಣದಲ್ಲಿ ತಕರಾರು ಅರ್ಜಿಗಳನ್ನು ಭೂಸ್ವಾಧೀನ ಪ್ರಕ್ರಿಯೆ ಅಧಿಕಾರಿಗಳು ಸ್ವೀಕರಿಸಿದರು. ತುರುವನಹಳ್ಳಿಯಿಂದ ತಮ್ಮಟದಹಳ್ಳಿ ಗೇಟ್‌ವರೆಗೆ ಕಾಮಗಾರಿ ನಡೆಯುವ ಸ್ಥಳದ ರೈತರು ದಾಖಲೆಗಳನ್ನು ಸಲ್ಲಿಸಿದರು.
ಉದ್ದೇಶಿತ ಕಾಮಗಾರಿಗೆ 32.05 ಹೆಕ್ಟೇರ್ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಅಧಿಸೂಚನೆ ಹೊರಡಿಸಲಾಗಿದೆ. ಕಾಮಗಾರಿಯಲ್ಲಿ ಪ್ರಮುಖವಾಗಿ ತುರುವನಹಳ್ಳಿಯಿಂದ ಚಿಕ್ಕಮಗಳೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಕಡೂರು ಹೊರವಲಯದಲ್ಲಿ ಬೈಪಾಸ್ ರಸ್ತೆ, ಹಿರೇನಲ್ಲೂರು ಗ್ರಾಮದ ಪಕ್ಕ ಬೈಪಾಸ್, ಗಿರಿಯಾಪುರ ಗ್ರಾಮದ ಬಳಿ ಭಾಗಶಃ ಬೈಪಾಸ್ ರಸ್ತೆ ನಿರ್ಮಿಸಲಾಗುವುದು. ಒಟ್ಟು 328 ಸರ್ವೇ ನಂಬರ್‌ಗಳ ಜಮೀನಿನ ಮಾಲೀಕರು ಅರ್ಜಿ ಸಲ್ಲಿಸಿದರು. ಪುರಸಭೆ ವ್ಯಾಪ್ತಿಯೊಳಗೆ ಮತ್ತು ಗ್ರಾಮೀಣ ಪ್ರದೇಶದ ಜಮೀನು ಕಳೆದುಕೊಳ್ಳುವ ರೈತರಿಗೆ ಪರಿಹಾರ ನೀಡುವಲ್ಲಿ ವ್ಯತ್ಯಾಸ ಇರುತ್ತದೆ. ಮೊದಲು ರೈತರ ಅಹವಾಲು ಸ್ವೀಕರಿಸಲಾಗಿದೆ. ಬಳಿಕ ಹಂತ ಹಂತವಾಗಿ ಭೂ ಸ್ವಾಧಿನ ಪ್ರಕ್ರಿಯೆ ನಡೆಯಲಿದೆ ಎಂದು ರಾಷ್ಟ್ರೀಯ ಹೆದ್ದಾರಿ 176 ಪ್ರಾಧಿಕಾರದ ವ್ಯವಸ್ಥಾಪಕ ಜೆ. ಫಣಿರಾಜ್ ತಿಳಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಎಇಇ ನವೀನ್‌ಕುಮಾರ್, ಲಕ್ಷ್ಮೀಕಾಂತ್ ಇತರರಿದ್ದರು.