ದೊಡ್ಡಬಳ್ಳಾಪುರ: ಪಡಿತರ ಚೀಟಿ ತಿದ್ದುಪಡಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿ ಸರ್ಕಾರ ವಿವಿಧ ಸೌಲಭ್ಯಗಳಿಗೆ ಉಚಿತವಾಗಿ ಅರ್ಜಿ ಸಲ್ಲಿಸಲು ಮನೆ ಬಾಗಿಲಿನಲ್ಲೇ ವ್ಯವಸ್ಥೆ ಮಾಡಲಾಗುವುದು ಎಂದು ಎಂದು ಶಾಸಕ ಧೀರಜ್ ಮುನಿರಾಜು ತಿಳಿಸಿದರು.
ನಗರದ ಡಿ.ಕ್ರಾಸ್ ಬಳಿಯ ಶಾಸಕರ ಗೃಹಕಚೇರಿಯಲ್ಲಿ ಬುಧವಾರ ಬಿಜೆಪಿ ಮತ್ತು ಶ್ರೀ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜನರು, ಸರ್ಕಾರಿ ಸೌಲಭ್ಯ ಹಾಗೂ ಪ್ರಮಾಣ ಪತ್ರಗಳ ಅರ್ಜಿ ಸಲ್ಲಿಕೆಗಾಗಿ ಹಳ್ಳಿಗಳಿಂದ ಗ್ರಾಮಒನ್, ಸಿಎಸ್‌ಸಿ ಕೇಂದ್ರಗಳಿಗೆ ಬರಬೇಕು. ಇದರಿಂದ ಸಮಸ್ಯೆಯಾಗುತ್ತಿದ್ದು, ಯಾರು ಅರ್ಜಿ ಸಲ್ಲಿಸಬೇಕೆಂಬ ಮಾಹಿತಿಯನ್ನು ಸಹಾಯವಾಣಿ ಮೂಲಕ ತಿಳಿಸಿದರೆ, ಮುಂದಿನ 24 ಗಂಟೆಯೊಳಗೆ ಆಪರೇಟರ್‌ಗಳು ಅರ್ಜಿದಾರರ ಮನೆ ಬಾಗಿಲಿಗೆ ಬಂದು ಉಚಿತವಾಗಿ ಅರ್ಜಿ ಸಲ್ಲಿಕೆ ಮಾಡಲಿದ್ದಾರೆ ಎಂದರು.
ಪ್ರತಿವರ್ಷ ಡಿ.25ರಂದು ಪ್ರತಿಭಾ ಪುರಸ್ಕಾರ
ಕಳೆದ 5 ವರ್ಷಗಳಿಂದ ಸತತವಾಗಿ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್‌ನಿಂದ ತಾಲೂಕಿನ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈ ವರ್ಷದಿಂದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸ್ಮರಣಾರ್ಥವಾಗಿ ಪ್ರತಿ ವರ್ಷ ಡಿ.25ರಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ ಎಂದ ಶಾಸಕರು, ಸಾಧಕರು ಹೆಚ್ಚಾಗಿ ಬಡಕುಟುಂಬದಿಂದ ಬಂದವರೇ ಆಗಿದ್ದಾರೆ. ಜಗತ್ತನ್ನು ಆಳುತ್ತಿರುವವರು ಹೆಚ್ಚಿನವರು ಬುದ್ಧಿವಂತರೇ. ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ, ಒಳ್ಳೆಯ ಗುಣ ಕಲಿಯಬೇಕು. ನಿರಂತರ ಪ್ರಯತ್ನದಿಂದ ಯಶಸ್ಸು ದೊರೆಯುತ್ತದೆ. ಸಮಾಜಕ್ಕೆ ಉತ್ತಮ ವಿದ್ಯಾರ್ಥಿಗಳಾಗಬೇಕು ಎಂದರು.
ದೂರು ನೀಡಲು ವೆಬ್‌ಸೈಟ್
ತಾಲೂಕಿನ ಗ್ರಾಮ, ವಾರ್ಡ್‌ಗಳಲ್ಲಿ ಜನರ ಸಮಸ್ಯೆಗಳ ಬಗ್ಗೆ ದೂರು ನೀಡಲು ಹಾಗೂ ವಿವಿಧ ಇಲಾಖೆಗಳ ಮಾಹಿತಿ ಜನರಿಗೆ ತಿಳಿಯಲು ವೆಬ್‌ಸೈಟ್ ಆರಂಭಿಸಲಾಗಿದ್ದು, ಜ.1ರಿಂದ ಕಾರ್ಯಾರಂಭವಾಗಲಿದೆ. ತಾಲೂಕಿನ ಪ್ರತಿ ಗ್ರಾಮ ಹಾಗೂ ನಗರ ಮಟ್ಟದ ಅಧಿಕಾರಿಗಳ ಮಾಹಿತಿಯು ವೆಬ್‌ಸೈಟ್ ಡಿಡಿಡಿ.ಈಟಚಿಚ್ಝ್ಝಟ್ಠ್ಟ.್ಚಟಞ ನಲ್ಲಿ ಲಭ್ಯವಾಗಲಿದೆ ಎಂದು ಶಾಸಕರು ತಿಳಿಸಿದರು.
ಅರ್ಥಪೂರ್ಣ ಕಾರ್ಯಕ್ರಮ
ತಾಲೂಕಿನ ವಿದ್ಯಾರ್ಥಿಗಳಿಗೆ ಬೆಂಬಲವಾಗಿ ನಿಂತಿರುವ ಅಂಜನಾದ್ರಿ ಚಾರಿಟಬಲ್ ಟ್ರಸ್ಟ್‌ನ ಸಂಸ್ಥಾಪಕ ಮುನಿರಾಜು ಹಾಗೂ ಶಾಸಕ ಧೀರಜ್ ಮುನಿರಾಜು ಅವರ ಕಾರ್ಯ ಶ್ಲಾಘನೀಯ. ವಿಶೇಷವಾಗಿ ದೇಶ ಕಂಡ ಅಪ್ರತಿಮ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥವಾಗಿ ಪ್ರೋತ್ಸಾಹ ಧನ ವಿತರಣೆ ಮಾಡುತ್ತಿರುವುದು ಅರ್ಥಪೂರ್ಣವಾಗಿದೆ ಎಂದು ಪಕ್ಷದ ಹಿರಿಯ ಮುಖಂಡ ಕೆ.ಎಚ್.ಹನುಮಂತರಾಯಪ್ಪ ಹೇಳಿದರು.