ವಿಜಯಪುರ: ನ್ಯಾಯಮೂರ್ತಿ ಎ. ಜಿ. ಸದಾಶಿವ ಆಯೋಗ ವರದಿ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲು ಕರ್ನಾಟಕ ಮಾದಿಗ ಜನಸಂಘ ಹೋರಾಟ ಸಮಿತಿ ಕಾರ್ಯಾಧ್ಯಕ್ಷ ಸಾಯಿಕುಮಾರ ಬಿಸನಾಳ ಒತ್ತಾಯಿಸಿದರು.
ಈ ವಿಷಯದಲ್ಲಿ ಈಗಾಗಲೇ ಸಾಕಷ್ಟು ಹೋರಾಟ ಮಾಡಿಕೊಂಡು ಬರಲಾಗಿದೆ. ಈವರೆಗೂ ಬೇಡಿಕೆ ಈಡೇರಿಲ್ಲ. ಪ್ರಸಕ್ತ ವಿಧಾನ ಮಂಡಲ ಅಧಿವೇಶನದಲ್ಲಾದರೂ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಬೇಕು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಜಾತಿ-ಜಾತಿಗಳ ನಡುವಿನ ಆರ್ಥಿಕ ಅಸಮಾನತೆ ಮತ್ತು ಶೋಷಣೆಯನ್ನು ಅರಿತು ಸಮಾಜದ ಮುಖ್ಯ ವಾಹಿನಿಯಲ್ಲಿ ಎಲ್ಲ ದಲಿತ ವರ್ಗಗಳಿಗೂ ಶಿಕ್ಷಣ, ಉದ್ಯೋಗ, ಆರ್ಥಿಕ ಸಮಾನತೆ, ಸ್ವಾಭಿಮಾನ, ಸಂಘಟನೆ, ಸ್ವಾತಂತ್ರ್ಯ, ಆತ್ಮಗೌರವ ಮತ್ತು ರಾಜಕೀಯ ಅಧಿಕಾರಿಗಳು ಸಮಾನ ಹಂಚಿಕೆಯಾಗಲೆಂದು ಡಾ.ಬಾಬಾಸಾಹೇಬ ಅಂಬೇಡ್ಕರ್ ಸಂವಿಧಾನದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ ಅದನ್ನು ಜಾರಿಗೆ ತರಬೇಕಾಗಿರುವುದು ಆಡಳಿತ ಸರ್ಕಾರಗಳು ಮತ್ತು ಜನಪ್ರತಿನಿಧಿಗಳ ಕರ್ತವ್ಯ ಎಂದರು.
ಮಾದಿಗ ಸಮುದಾಯದ 25 ವರ್ಷಗಳ ಹೋರಾಟದ ಫಲವಾಗಿ ನ್ಯಾ.ಸದಾಶಿವ ಆಯೋಗ ರಚನೆಯಾಯಿತು. 15 ಕೋಟಿ ರೂ.ಬಿಡುಗಡೆ ಮಾಡಿ ಸಮೀಕ್ಷೆ ನಡೆಸಿ ವರದಿ ಒಪ್ಪಿಸಲಾಯಿತು. ಆದರೆ ಈವರೆಗೂ ಅಂಗೀಕಾರಗೊಂಡಿಲ್ಲ ಎಂದರು.
ಸಂಸ್ಥಾಪಕ ಅಧ್ಯಕ್ಷ ಪರಶುರಾಮ ರೋಣಿಹಾಳ ಮತ್ತು ರಾಜ್ಯ ಉಪಾಧ್ಯಕ್ಷ ಸದಾನಂದ ಗುನ್ನಾಪೂರ ಮಾತನಾಡಿ, ನೂರು ದಿನಗಳು ಗುಲಾಮರಾಗಿ ಬದುಕುವ ಬದಲು ಒಂದು ದಿನ ಅತ್ಮಗೌರವ ಮತ್ತು ಸ್ವಾಭಿಮಾನದಿಂದ ಬದುಕಬೇಕು ಎಂದು ತೀರ್ಮಾನಿಸಿ ನಮ್ಮ ಹೋರಾಟವನ್ನು ಅಣಿಗೊಳಿಸುತ್ತಿದ್ದೇವೆ. ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡದೆ ಇದ್ದರೆ 2023ರ ಚುನಾವಣೆಯಲ್ಲಿ ಮಾದಿಗ ಸಮುದಾಯದ ಮತದಾರರ ನಿರ್ಲಕ್ಷೃಕ್ಕೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮುಖಂಡರಾದ ದಶರಥ ಹೊನ್ನಳ್ಳಿ, ಶಿವಾನಂದ ಗೋಗೇರಿ, ಸಂಪತ ಯಡಹಳ್ಳಿ, ಶರಣು ಬ್ಯಾಳಿ, ಹಣಮಂತ ಬಿರಾದಾರ, ವಿಠಲ ಸಂದಿಮನಿ, ಸಾಗರ ಪೂಜಾರಿ, ಮುರುಗೇಶ ಜೈನಾಪೂರ, ಧರ್ಮರಾಜ ಹೊಸೂರ, ಏಕನಾಥ ಕಟ್ಟೆಮನಿ, ಜಗದೀಶ ಸರಸರ, ಮಾದೇಶ ತಮದಡ್ಡಿ, ರೇವಣಸಿದ್ದ ವಾಲಿಕಾರ, ಶಿವಾನಂದ ತಿಕೋಟಿಕರ, ಶಂಕರ ಹುಲ್ಲೂರ, ರವಿ ನಾಟಿಕಾರ, ಮಲ್ಲು ಜಿಗಜಿಣಗಿ, ಲಾಯಪ್ಪ ಬಸನಾಳ, ರಾಯಣ್ಣ ರೋಣಿಹಾಳ ಮತ್ತಿತರರಿದ್ದರು.