ಜಿಲ್ಲೆ

ಭ್ರಷ್ಟರೊಂದಿಗೆ ಎಸಿಬಿ ಖಾಕಿ ಶಾಮೀಲು ; ನ್ಯಾಯಕ್ಕಾಗಿ ಕೋರ್ಟ್, ಡಿಜಿಪಿ ಮೊರೆ ಹೋದ ಮುಖ್ಯಶಿಕ್ಷಕ

Chikkaballapur

ಗೌರಿಬಿದನೂರು/ಚಿಕ್ಕಬಳ್ಳಾಪುರ : ಶಾಲೆಯ ಅಭಿವೃದ್ಧಿ ಕೆಲಸಗಳ ಬಿಲ್ ಮಂಜೂರು ಮಾಡಲು ಮೇಲಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂದು ಮುಖ್ಯಶಿಕ್ಷಕರೊಬ್ಬರು ದಾಖಲೆಗಳ ಸಮೇತ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದರೆ, ಅಲ್ಲಿನ ಪೊಲೀಸರು ಆರೋಪಿಗಳೊಂದಿಗೆ ಶಾಮೀಲಾಗಿ ಭ್ರಷ್ಟರನ್ನು ರಕ್ಷಿಸುತ್ತಿರುವ, ಹೊಂದಾಣಿಕೆ ಮಾಡಿಕೊಳ್ಳುವಂತೆ ದೂರುದಾರರಿಗೆ ಒತ್ತಡ ಹೇರುತ್ತಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಡ್ಲಘಟ್ಟ ತಾಲೂಕಿನ ಬಚ್ಚನಹಳ್ಳಿಯ ಸರ್ಕಾರಿ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯ ಮುಖ್ಯಶಿಕ್ಷಕ ಎಸ್.ಗಣೇಶ್ ಜಿಲ್ಲಾ ನ್ಯಾಯಾಲಯ ಹಾಗೂ ಪೊಲೀಸ್ ಮಹಾನಿರ್ದೇಶಕರ ಮೊರೆ ಹೋಗಿದ್ದು, ಕೋರ್ಟ್ ಆದೇಶದಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಡಾ.ಶ್ರೀಧರ್, ಕಚೇರಿ ವ್ಯವಸ್ಥಾಪಕ ಮಹಾಂತೇಶ್ ಓಲೇಕಾರ್, ಚಿಕ್ಕಬಳ್ಳಾಪುರ ಎಸಿಬಿ ಉಪಾಧೀಕ್ಷಕ ಆರ್.ಮಂಜುನಾಥ್, ಇನ್‌ಸ್ಪೆಕ್ಟರ್‌ಗಳಾದ ಲಕ್ಷ್ಮೀದೇವಿ, ರವಿಕುಮಾರ್, ಕಾನ್‌ಸ್ಟೆಬಲ್ ಮಂಜುನಾಥ್ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನೆಲೆ: ಶಿಕ್ಷಣ ಇಲಾಖೆ ನೌಕರರಾದ ಗಣೇಶ್ ಎರವಲು ಸೇವೆಯ ಆಧಾರದ ಮೇಲೆ 3 ವರ್ಷಗಳಿಂದ ಬಚ್ಚನಹಳ್ಳಿಯ ಪರಿಶಿಷ್ಟ ವರ್ಗಗಳ ಆಶ್ರಮ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದಾರೆ. ಶಾಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಲಂಕಾರಿಕ ಗಿಡಗಳನ್ನು ಬೆಳೆಸಲು ಕೊಟ್ಟಿಗೆ ಗೊಬ್ಬರ ಖರೀದಿ, ಹನಿ ನೀರಾವರಿ ಪೈಪ್ ಅಳವಡಿಕೆ, ಬಾಳೆ, ನುಗ್ಗೆ, ಗುಲಾಬಿ ಗಿಡಗಳ ಖರೀದಿ, ಪಂಪು ಮೋಟಾರ್ ಅಳವಡಿಕೆ, ಸಿ.ಸಿ.ಕ್ಯಾಮೆರಾ ದುರಸ್ತಿ ಸೇರಿ ಇತರ ಕೆಲಸಗಳಿಗೆ 96,000 ರೂ.ವೆಚ್ಚ ಮಾಡಿದ್ದು, ಈ ಹಣ ಮರುಪಾವತಿಸುವಂತೆ ಶಿಕ್ಷಕ ಗಣೇಶ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶ್ರೀಧರ್, ಕಚೇರಿ ಅಧೀಕ್ಷಕ ಮಹಾಂತೇಶ್ ಅವರಿಗೆ ಕಾಮಗಾರಿಗಳ ಬಿಲ್ ನೀಡಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳು ನಾವು ಯಾರಿಗೂ ತೊಂದರೆ ಕೊಡುವುದಿಲ್ಲ, ಹಂಚಿಕೊಂಡು ತಿನ್ನೋಣ, 96,000 ರೂ. ಪೂರ್ತಿ ಬಿಲ್ ಮಾಡಿಕೊಡುತ್ತೇವೆ, ಆದರೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗೆ 20 ಸಾವಿರ ರೂ., ತಾಲೂಕು ಸಹಾಯಕ ನಿರ್ದೇಶಕ ಜಗದೀಶ್‌ಗೆ 10 ಸಾವಿರ ರೂ. ನನಗೆ 10 ಸಾವಿರ ರೂ. ನೀಡಬೇಕೆಂದು ಕಚೇರಿ ಅಧೀಕ್ಷಕ ಮಹಾಂತೇಶ್ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ.

ಭ್ರಷ್ಟರೊಂದಿಗೆ ಅಧಿಕಾರಿಗಳ ಶಾಮೀಲು : ಲಂಚ ನೀಡಲು ಒಪ್ಪದ ಶಿಕ್ಷಕ ಗಣೇಶ್, ಪ್ರಕರಣಕ್ಕೆ ಸಂಬಂಧಿಸಿದ ಸಂಭಾಷಣೆಗಳನ್ನು ಒಳಗೊಂಡ ಧ್ವನಿ ಮುದ್ರಣ ಹಾಗೂ ಅಗತ್ಯ ದಾಖಲೆಗಳೊಂದಿಗೆ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ಸಲ್ಲಿಸಿದ್ದಾರೆ. ಆದರೆ ಅಲ್ಲಿನ ಡಿವೈಎಸ್ಪಿ, ಪೊಲೀಸ್ ವೃತ್ತ ನಿರೀಕ್ಷಕರು ಹಾಗೂ ಸಿಬ್ಬಂದಿ ಆರೋಪಿಗಳೊಂದಿಗೆ ಶಾಮೀಲಾಗಿದ್ದು, ಪ್ರಕರಣ ತಿರುಚುವ ಪ್ರಯತ್ನ ಮಾಡಿದ್ದಾರೆ. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಜಿಲ್ಲೆಗೆ ಬಂದು 3 ತಿಂಗಳಾಗಿದ್ದು, ಅವರ ವಿರುದ್ಧ ದೂರು ದಾಖಸಿಸುವ ಬದಲು ಕಚೇರಿ ಅಧೀಕ್ಷಕ ಮಹಾಂತೇಶ್ ವಿರುದ್ಧ ದಾಳಿ ಮಾಡೋಣ, ಹೊಸದಾಗಿ ಮಾತನಾಡಿರುವ ಧ್ವನಿ ಮುದ್ರಣ ತರುವಂತೆ ಶಿಕ್ಷಕನನ್ನು ಸತಾಯಿಸಿದ್ದಾರೆ. ಇದಕ್ಕೆ ಗಣೇಶ್ ಒಪ್ಪದಿದ್ದಾಗ, ದೂರು ನೀಡಿರುವ ಮಾಹಿತಿಯನ್ನು ಪೊಲೀಸರು ಆರೋಪಿಗಳೊಂದಿಗೆ ಹಂಚಿಕೊಂಡಿದ್ದಾರೆ. ಭ್ರಷ್ಟರನ್ನು ಹೆಡೆಮುರಿ ಕಟ್ಟಬೇಕಾದ ಅಧಿಕಾರಿಗಳೇ ಶಾಮೀಲು ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿದ್ದು, ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ, ಸಿಬ್ಬಂದಿ ಹಾಗೂ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಬೇಕೆಂದು ಗಣೇಶ್ ಜಿಲ್ಲಾ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು, ಕೋರ್ಟ್ ಆದೇಶದಂತೆ 6 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.

ಶಿಕ್ಷಕರಿಗೆ ಅಧಿಕಾರಿಗಳಿಂದ ಬೆದರಿಕೆ : ದೂರು ನೀಡಿದ ಕೆಲ ದಿನಗಳ ಬಳಿಕ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಕಚೇರಿಗೆ ಹೋದ ಶಿಕ್ಷಕ ಗಣೇಶ್‌ಗೆ ಅಧೀಕ್ಷಕ ಮಹಾಂತೇಶ ಬೆದರಿಕೆ ಹಾಕಿದ್ದಾರೆ. ನೀನು ನಮ್ಮ ವಿರುದ್ಧ ದೂರು ನೀಡಿರೋದು ಗೊತ್ತು, ದೂರು ನೀಡಿ ಏನ್ಮಾಡ್ಕೊಂಡೆ, ಸ್ವಲ್ಪ ದುಡ್ಡು ಖರ್ಚಾಯ್ತು ಅಷ್ಟೇ, ಇನ್ಮುಂದೆ ಅದು ಹೇಗೆ ಇಲಾಖೆಯಲ್ಲಿ ಕೆಲಸ ಮಾಡ್ತಿಯೋ ನೋಡ್ಕೋತೀವಿ ಎಂದು ಬೆದರಿಕೆ ಹಾಕಿದ್ದಾರೆ ಎಂದು ಗಣೇಶ್ ಕೋರ್ಟ್ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ ನೀಡಿರುವ ದೂರಿನಲ್ಲಿ ಗಮನ ಸೆಳೆದಿದ್ದಾರೆ.