ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಅಕಾಡೆಮಿಗಳು ಹಾಗೂ ಪ್ರಾಧಿಕಾರಗಳ ಅಧ್ಯಕ್ಷರ ಸಭೆಯನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಕಚೇರಿಯಲ್ಲಿ ನಡೆಸಿರುವುದಕ್ಕೆ ವಿವಿಧ ಕ್ಷೇತ್ರಗಳ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿಗಳು ಸಾಹಿತ್ಯ, ಕಲೆ ಸಂಸ್ಕೃತಿ ಹಾಗೂ ಭಾಷೆಗೆ ಸಂಬಂಧಿಸಿದ ನಾನಾ ಅಕಾಡೆಮಿ ಹಾಗೂ ಪ್ರಾಧಿಕಾರಗಳ ಅಧ್ಯಕ್ಷರನ್ನು ಕಚೇರಿಗೆ ಕರೆದು ಸಭೆ ನಡೆಸಿದ್ದು ಅತ್ಯಂತ ವಿಷಾದನೀಯ. ಇದು ಪ್ರಗತಿಪರ ಕನ್ನಡ ಸಾರಸ್ವತ ಲೋಕಕ್ಕೆ ಒಂದು ಕಪ್ಪು ಚುಕ್ಕೆ ಎಂದು ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಬೇಸರಿಸಿದ್ದಾರೆ.
ಈ ಅಕಾಡೆಮಿ ಹಾಗೂ ಪ್ರಾಧಿಕಾರಗಳು ವಿಷಯ ತಜ್ಞರ ನೆಲೆಯಲ್ಲಿ ಕಾರ್ಯನಿರ್ವಹಿಸುವ ಸ್ವಾಯತ್ತ ಸಂಸ್ಥೆಗಳು. ಇವುಗಳಿಗೆ ಸರ್ಕಾರವೇ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸಿದ್ದರೂ, ಅದು ತಜ್ಞತೆಯ ಮತ್ತು ಆ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಮಾನದಂಡವಾಗಿಟ್ಟುಕೊಂಡು ನೇಮಕ ಮಾಡಲಾಗಿರುತ್ತದೆಯೇ ಹೊರತು ರಾಜಕೀಯ ಅಥವಾ ಪಕ್ಷ ರಾಜಕಾರಣ ಮಾನದಂಡವಲ್ಲ. ಅಧ್ಯಕ್ಷರು ಮತ್ತು ಸದಸ್ಯರು ತಾವು ನೇಮಕವಾದ ಸಂಸ್ಥೆಯನ್ನು ಪ್ರತಿನಿಧಿಸುತ್ತಾರೆಯೇ ಹೊರತು ರಾಜಕೀಯ ಪಕ್ಷವನ್ನಲ್ಲ ಎಂದು ತಿಳಿಸಿದ್ದಾರೆ.
ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಅಧ್ಯಕ್ಷರು ಹಾಗೂ ಸದಸ್ಯರು ಏಕೆ ಭಾಗವಹಿಸಿದ್ದರು ಎಂಬುದು ಅರ್ಥವಾಗುತ್ತಿಲ್ಲ. ಇಂತಹ ನಡೆಗಳಿಂದ, ತಮ್ಮ ವೈಯುಕ್ತಿಕ ಬದುಕಿನಲ್ಲಿ ಪಕ್ಷ ರಾಜಕಾರಣದಿಂದ ದೂರವಿದ್ದು, ಪ್ರಜಾಸತ್ತಾತ್ಮಕ ಜಾತ್ಯತೀತ ಮೌಲ್ಯಗಳ ನೆಲೆಯಲ್ಲಿ ಸಮಸಮಾಜದ ನಿರ್ಮಾಣಕ್ಕಾಗಿ ಸಂವಿಧಾನಬದ್ಧ ರಾಜಕಾರಣದಲ್ಲಿ ತೊಡಗಿರುವ ಲಕ್ಷಾಂತರ ಬರಹಗಾರರು, ಸಾಹಿತಿಗಳು ಮತ್ತು ಪ್ರಗತಿಪರರ ಬಗ್ಗೆ ಒಂದು ಕೆಟ್ಟ ಸಂದೇಶ ಕಳಿಸಿದಂತಾಗಲಿದೆ. ಈಗಾಗಲೇ ಈ ಸಂಸ್ಥೆಗಳನ್ನು ಗಂಜಿ ಕೇಂದ್ರಗಳೆಂದು ಕರೆದು ಅವುಗಳ ಘನತೆಗೆ ಕುಂದುಂಟಾಗಿದೆ. ಹೀಗಿರುವಾಗ, ಅದಕ್ಕೆ ಇಂಬು ಕೊಡುವ ರೀತಿಯಲ್ಲಿ ಈ ಬೆಳವಣಿಗೆ ನಡೆದದ್ದು ಕನ್ನಡ ಸಾರಸ್ವತ ಲೋಕ ತಲೆ ತಗ್ಗಿಸುವಂತೆ ಮಾಡಿದೆ ಎಂದು ಬೇಸರಿಸಿದ್ದಾರೆ.
ಸಮಾಜದ ಸಾಕ್ಷಿ ಪ್ರಜ್ಞೆಯಾಗಿ ಕೆಲಸ ಮಾಡಬೇಕಾದವರು ಒಂದು ಪಕ್ಷದ ಬಾಲಂಗೋಚಿಯಾದಂತಾಗುತ್ತದೆ. ಉಪಮುಖ್ಯಮಂತ್ರಿಗಳು ಅಧ್ಯಕ್ಷರು, ಸದಸ್ಯರನ್ನು ಅಭಿನಂದಿಸುವ ಆಶಯ ಹೊಂದಿದ್ದರೆ, ವಿಧಾನಸೌಧದಲ್ಲಿಯೇ ಸಭೆ ಕರೆಯಬಹುದಿತ್ತು. ಬದಲಿಗೆ ಪಕ್ಷದ ಕಚೇರಿಗೆ ಕರೆದದ್ದು, ಅಕಾಡೆಮಿ ಮತ್ತು ಪ್ರಾಧಿಕಾರಗಳಂತಹ ಸ್ವಾಯತ್ತ ಸಂಸ್ಥೆಗಳ ಘನತೆ ಕುಗ್ಗಿಸಿದೆ. ಇದೇ ಸಂದರ್ಭದಲ್ಲಿ ಅಲ್ಲಿ ಭಾಗವಹಿಸಿದ ಅಧ್ಯಕ್ಷರು, ಸದಸ್ಯರು ಪಕ್ಷ ರಾಜಕಾರಣಕ್ಕೆ ಹೊರತಾಗಿ ಜವಾಬ್ದಾರಿ ಹಾಗೂ ಘನತೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮಾದವೆಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.