ಮಂಡ್ಯ: ವಿದ್ಯಾರ್ಥಿಗಳು ತಮ್ಮ ಮುಂದಿನ ಉತ್ತಮ ಭವಿಷ್ಯಕ್ಕಾಗಿ ಆರೋಗ್ಯ, ಸಮಯ, ಶಿಸ್ತು ಮತ್ತು ಓದುವ ಕೌಶಲಗಳನ್ನು ಅರಿಯಬೇಕು ಎಂದು ಸಂಪನ್ಮೂಲ ವ್ಯಕ್ತಿ ಡಾ.ಸತ್ಯವತಿ ಬಸವರಾಜು ಹೇಳಿದರು.
ತಾಲೂಕಿನ ಜೋಡಿಹೊಡಾಘಟ್ಟದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ಸಕ್ಕರೆ ನಾಡು ಲಯನ್ಸ್ ಸಂಸ್ಥೆಯಿಂದ ಆಯೋಜಿಸಿದ್ದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಕೌಶಲ ಮಾರ್ಗದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಪಾಲಕರ ಸಹಕಾರದಿಂದ ಶೈಕ್ಷಣಿಕ ಹಾಗೂ ಇನ್ನಿತರ ಸಹಾಯ ಸಿಗುತ್ತಿದೆ. ಅದರಂತೆ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧಿಸಲು ಬೇಕಾದಂತಹ ಸಮಯಪಾಲನೆ, ಸತತ ಪ್ರಯತ್ನ, ಒಳ್ಳೆಯ ನಡತೆಯನ್ನು ಮೈಗೂಡಿಸಿಕೊಳ್ಳಬೇಕು. ಜತೆಗೆ ಶಾಲಾ ಹಾಗೂ ಮನೆ ವೇಳಾಪಟ್ಟಿ ಅಳವಡಿಸುವ ಮೂಲಕ ನಿತ್ಯ ಅಭ್ಯಾಸ ಕ್ರಮ ನಡೆಸಬೇಕು ಎಂದು ಸಲಹೆ ನೀಡಿದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶಿಕ್ಷಕ ಕೆ.ಆರ್.ಶಶಿಧರ ಈಚಗೆರೆ, ಹದಿಹರೆಯದ ವಿದ್ಯಾರ್ಥಿಗಳು ಗುರಿ ಸಾಧಿಸಲು ಮನಸ್ಸನ್ನು ಏಕಾಗ್ರತೆಗೊಳಿಸಿಕೊಳ್ಳಬೇಕು. ತನಗೆ ಬೇಡದ ವಿಚಾರದಲ್ಲಿ ಆಸಕ್ತಿ ವಹಿಸದೆ ದುಶ್ಚಟಗಳು, ಟಿವಿ, ಧಾರಾವಾಹಿ, ಮೊಬೈಲ್, ಸಹವಾಸ ದೋಷಗಳಿಂದ ದೂರವಿರಬೇಕು. ಕ್ಲಿಷ್ಟಕರ ಪಾಠದ ಬಗ್ಗೆ ಶಿಕ್ಷಕರಿಗೆ ಹೇಳಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದರು.
ಶಾಲೆಯ ಶಿಕ್ಷಕರಾದ ಡಿ.ಎಸ್.ಕೃಷ್ಣೇಗೌಡ, ಆರ್.ಚಂದ್ರಮತಿ, ಬಿ.ಸಿ.ಶಿಲ್ಪಾ, ಪವಿತ್ರಾ, ಲೋಕೇಶ್ ಇತರರಿದ್ದರು. ಇದೇ ವೇಳೆ ಮಕ್ಕಳೊಂದಿಗೆ ಪ್ರಶ್ನೋತ್ತರ ಸಂವಾದ ನಡೆಸಲಾಯಿತು. ನಂತರ ಶಾಲಾ ಆವರಣದಲ್ಲಿ ಮಕ್ಕಳಿಗೆ ನಡೆದ ಪೀಪಿ ಆಟ ರಂಜಿಸಿತು.