ಕೊಂಡ್ಲಹಳ್ಳಿ: ಕ್ಷೇತ್ರದಲ್ಲಿ ಶೈಕ್ಷಣಿಕ ಪ್ರಗತಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದು ಶಾಸಕ ಎನ್.ವೈ.ಗೋಪಾಲಕೃಷ್ಣ ಹೇಳಿದರು.
ಕೋನಸಾಗರ ಗ್ರಾಮದಲ್ಲಿ ಎಸ್ಸಿ ಬಾಲಕರ ವಿದ್ಯಾರ್ಥಿ ವಸತಿ ನಿಲಯ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಗಡಿಭಾಗದ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಸೌಲಭ್ಯಗಳನ್ನು ಹಂತ-ಹಂತವಾಗಿ ಕಲ್ಪಿಸಲು ಪ್ರಯತ್ನಿಸಲಾಗುವುದು. ಕೋನಸಾಗರ ಗ್ರಾಮದಲ್ಲಿ ಅಂದಾಜು 6.5 ಕೋಟಿ ರೂ. ವೆಚ್ಚದಲ್ಲಿ ಬಾಲಕರ ವಿದ್ಯಾರ್ಥಿ ನಿಲಯದ ಮಂಜೂರಾತಿಯಾಗಿರುವುದು ಶೈಕ್ಷಣಿಕ ಬೆಳವಣಿಗೆಗೆ ಮತ್ತಷ್ಟು ಸಹಕಾರಿಯಾಗಲಿದೆ ಎಂದರು.
ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ವಸತಿ ನಿಲಯದ ಕಟ್ಟಡವನ್ನು ಗುಣಮಟ್ಟದಿಂದ ಪೂರ್ಣಗೊಳಿಸಬೇಕು. ಸಂಬಂಧಿಸಿದ ಅಧಿಕಾರಿಗಳು ಪದೇ ಪದೆ ಭೇಟಿ ನೀಡಿ ಮೇಲುಸ್ತುವಾರಿ ವಹಿಸಬೇಕು ಎಂದು ಸೂಚಿಸಿದರು.
ಮೊಳಕಾಲ್ಮೂರು ಪಿಡಬ್ಲ್ಯುಡಿ ಎಇಇ ಲಕ್ಷ್ಮೀನಾರಾಯಣ ಮಾತನಾಡಿದರು. ತಹಸೀಲ್ದಾರ್ ಎಂ.ವಿ.ರೂಪಾ, ಗ್ರಾಪಂ ಅಧ್ಯಕ್ಷ ಪಿ.ರಾಮಮೂರ್ತಿ, ಉಪಾಧ್ಯಕ್ಷೆ ಸಿದ್ದಮ್ಮ, ಸಮಾಜ ಕಲ್ಯಾಣ ಇಲಾಖೆಯ ಎಡಿ ಮಾಲತಿ, ಕುರುಬ ಸಂಘದ ತಾಲೂಕಾಧ್ಯಕ್ಷ ಜಿ.ಎನ್.ಜಗದೀಶ್, ತಾಪಂ ಮಾಜಿ ಸದಸ್ಯ ರೇಷ್ಮೆ ವೀರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಬಸವರಾಜ್, ಮಲ್ಲಯ್ಯ, ಪಿಡಿಒ ಬಸವರಾಜ್ ಇತರರಿದ್ದರು.