ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ವಿಧಿ ವಿಜ್ಞಾನ ಮತ್ತು ಅಪರಾಧ ಶಾಸ್ತ್ರ ವಿಭಾಗ ಹಾಗೂ ಧಾರವಾಡ ಪೊಲೀಸ್ ತರಬೇತಿ ಶಾಲೆ ಮಧ್ಯೆ ಶೈಕ್ಷಣಿಕ ಚಟುವಟಿಕೆಗಳಿಗೆ ಶುಕ್ರವಾರ ಒಪ್ಪಂದ ಮಾಡಿಕೊಳ್ಳಲಾಯಿತು.
ಕವಿವಿ ಸಿಂಡಿಕೇಟ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಕವಿವಿ ಕುಲಪತಿ ಪ್ರೊ. ಕೆ.ಬಿ. ಗುಡಸಿ ಹಾಗೂ ಧಾರವಾಡ ಪೋಲಿಸ್ ತರಬೇತಿ ಶಾಲೆ ಪ್ರಾಂಶುಪಾಲ ಎಂ.ಎಂ. ಯಾದವಾಡ ಒಪ್ಪಂದಕ್ಕೆ ಸಹಿ ಹಾಕಿದರು.
ಬಳಿಕ ಪ್ರೊ. ಕೆ.ಬಿ. ಗುಡಸಿ ಮಾತನಾಡಿ, ಸಮರ್ಪಕ ಮಾನವ ಸಂಪನ್ಮೂಲಗಳ ಬಳಕೆ, ಭವಿಷ್ಯತ್ತಿನಲ್ಲಿ ವಿಧಿ ವಿಜ್ಞಾನ ಹಾಗೂ ಅಪರಾಧ ಶಾಸ್ತ್ರ ವಿದ್ಯಾರ್ಥಿಗಳ ಮತ್ತು ಹೊಸ ಪೊಲೀಸ್ ಅಧಿಕಾರಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಶೈಕ್ಷಣಿಕ ಚಟುವಟಿಕೆಗಳಿಗೆ ಈ ಒಪ್ಪಂದ ಮಹತ್ವ ಪಡೆದಿದೆ. ಸರ್ಕಾರದ ಸಂಸ್ಥೆಗಳು ಹಾಗೂ ವಿವಿಯ ಮಧ್ಯೆ ಸಮರ್ಪಕವಾದ ಸಂಪನ್ಮೂಲಗಳ ಬಳಕೆಗೆ ನಿಕಟ ಸಂಬಂಧ, ಸಹಕಾರ ಹೊಂದುವದು ಅವಶ್ಯ. ಪೊಲೀಸ್ ಅಧಿಕಾರಿಗಳ ಕಾರ್ಯ ಕ್ಷಮತೆ ಹೆಚ್ಚಿಸುವಲ್ಲಿ ಈ ಒಪ್ಪಂದ ಅನುಕೂಲವಾಗಲಿದೆ ಎಂದರು.
ಕವಿವಿ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಡಾ. ಸುರೇಶ ತುವಾರ ಮಾತನಾಡಿ, ಹೊಸದಾಗಿ ನೇಮಕವಾದ ಪೊಲೀಸ್ ಟ್ರೈನಿಗಳಿಗೆ, ಡಿಪ್ಲೋಮಾ ಪದವಿ ನೀಡುವುದರ ಜತೆಗೆ ವಿಶೇಷ ತರಬೇತಿ ನೀಡಲಾಗುವುದು. ವಿಧಿ ವಿಜ್ಞಾನ ಮತ್ತು ಅಪರಾಧ ಶಾಸ್ತ್ರ, ಕಾನೂನು, ಮನೋವಿಜ್ಞಾನ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳ ಕುರಿತು ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು ಎಂದರು.
ಎಂ.ಎಂ. ಯಾದವಾಡ ಮಾತನಾಡಿದರು. ಕವಿವಿ ಪ್ರಭಾರಿ ಕುಲಸಚಿವೆ ಪ್ರೊ.ಚಂದ್ರಮಾ ಎಂ., ಮೌಲ್ಯಮಾಪನ ಕುಲಸಚಿವ ಪ್ರೊ.ಸಿ. ಕೃಷ್ಣಮೂರ್ತಿ, ಪ್ರೊ. ಡೇವಿಡ್, ತರಬೇತಿ ಶಾಲೆಯ ಪೊಲೀಸ್ ಅಧಿಕಾರಿಗಳು, ಇತರರು ಇದ್ದರು.