ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಜ್ಞಾನ, ಕೌಶಲ ಆಧರಿಸಿದ ಮೌಲ್ಯವರ್ಧಿತ ಕಾರ್ಯವೈಖರಿಯಿಂದ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆ ವರ್ತಮಾನದ ಅಗತ್ಯ. ಭವಿಷ್ಯದ ಆದ್ಯತೆಗಳಿಗೆ ಅನುಗುಣವಾಗಿ ಶಿಕ್ಷಣವನ್ನು ಉನ್ನತೀಕರಿಸಬಹುದು ಎಂದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಹೇಳಿದರು.
ಉಜಿರೆಯ ಎಸ್.ಡಿ.ಎಂ. ಸ್ನಾತಕೊತ್ತರ ಕೇಂದ್ರದ ವಿವಿಧ ವಿಭಾಗಗಳ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನಾ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯಾ ಬಿ.ಪಿ. ಮಾತನಾಡಿ ಬೋಧನೆ, ಸಂಶೋಧನೆ, ಪಠ್ಯಕೇಂದ್ರಿತ ಕಲಿಕೆ, ಪಠ್ಯೇತರ ಚಟುವಟಿಕೆಗಳು, ಸಮಾಜಪರ ವಿಸ್ತರಣಾ ಹೆಜ್ಜೆಗಳೊಂದಿಗೆ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳು ಅಧ್ಯಯನನಿರತರಾದಾಗಲೇ ಬೋಧನೆ ಅವಕಾಶ ಒದಗಿಸುವ ‘ಸ್ಟುಡೆಂಟ್ ಫ್ಯಾಕಲ್ಟಿ’ ಪರಿಕಲ್ಪನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ ಎಂದರು.
ಶೈಕ್ಷಣಿಕ ಮತ್ತು ಆಡಳಿತಾತ್ಮಕ ಪರಿಶೀಲನಾ ಸಮಿತಿ ತಜ್ಞರಾದ ಡಾ.ಜಯಕುಮಾರ್ ಎ.ಶೆಟ್ಟಿ, ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಅಕಾಡೆಮಿಕ್ ಸಂಯೋಜಕ ಎಸ್.ಎನ್.ಕಾಕತ್ಕರ್, ಎಸ್.ಡಿ.ಎಂ ಕಾಲೇಜಿನ ಉಪಪ್ರಾಂಶುಪಾಲರಾದ ನಂದಕುಮಾರಿ ಕೆ.ಪಿ. ಉಪಸ್ಥಿತರಿದ್ದರು.
ಉನ್ನತ ಶಿಕ್ಷಣ ವಲಯದಲ್ಲಿ ಕ್ಷಣಕ್ಷಣಕ್ಕೆ ಗಮನಾರ್ಹ ಬದಲಾವಣೆಗಳು ಆಗುತ್ತಿವೆ. ಹೊಸ ತಲೆಮಾರಿನ ಯುವಸಮೂಹವು ಕಲಿಕೆಗೆ ಸಂಬಂಧಿಸಿದಂತೆ ಮಹತ್ವಾಕಾಂಕ್ಷಿ ನಿರೀಕ್ಷೆಗಳನ್ನು ಇರಿಸಿಕೊಂಡಿದೆ. ಇದನ್ನು ದೃಷ್ಟಿಯಲ್ಲಿರಿಸಿಕೊಂಡು ಶೈಕ್ಷಣಿಕ ಮತ್ತು ಆಡಳಿತಾತ್ಮಕ ಹೆಜ್ಜೆಗಳು ಗಟ್ಟಿಗೊಳ್ಳಬೇಕು. ಆ ಮೂಲಕ ಸಾಂಸ್ಥಿಕ ಬೆಳವಣಿಗೆ ನಿಖರಗೊಳ್ಳುತ್ತದೆ. ಆಯಾ ಕಾಲದ ಅನಿವಾರ್ಯತೆಗಳಿಗೆ ತಕ್ಕಂತೆ ಉನ್ನತ ಶಿಕ್ಷಣ ವಲಯವೂ ಹೊಸ ಹೆಜ್ಜೆಗಳನ್ನು ಕ್ರಮಿಸಬೇಕು. ಬೋಧನೆ ಮತ್ತು ಕಲಿಕೆಗೆ ಮೌಲ್ಯವರ್ಧನೆಯನ್ನು ಅನ್ವಯಿಸಿಕೊಳ್ಳಬೇಕು.
ಡಾ.ಸತೀಶ್ಚಂದ್ರ ಎಸ್.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆ ಕಾರ್ಯದರ್ಶಿ