ಹೊಸನಗರ ತಾಲೂಕು ಕರಿಮನೆ ಗ್ರಾಪಂ ಎದುರು ಸಂಸದ ಬಿ.ವೈ.ರಾಘವೇಂದ್ರ ಅವರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರ ಅಹವಾಲು ಆಲಿಸಿದರು.  
ಜಿಲ್ಲೆ

ಅಕೇಶಿಯಾ ಕಡಿತಲೆ ಪ್ರಕರಣ: ಬಿಜೆಪಿ ಹೋರಾಟಕ್ಕೆ ಕಾಂಗ್ರೆಸ್ ಸಡ್ಡು; ಇಂದು ಕಿಮ್ಮನೆ, ಆರ್‌ಎಂಎಂ ನೇತೃತ್ವದಲ್ಲಿ ಪ್ರತಿಭಟನೆ

ಹೊಸನಗರ: ತಾಲೂಕಿನ ಕರಿಮನೆ ಅಕೇಶಿಯಾ ಕಡಿತಲೆ ವಿವಾದ ದಿನ ಕಳೆದಂತೆ ತೀವ್ರಗೊಳ್ಳುತ್ತಿದೆ. ಬಿಜೆಪಿ ಕಾರ್ಯಕರ್ತರು ನಡೆಸುತ್ತಿರುವ ಹೋರಾಟಕ್ಕೆ ಸಂಸದ ಬಿ.ವೈ.ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ ಬೆಂಬಲ ಸೂಚಿಸಿದ್ದರೆ, ಶಾಸಕ ಆರಗ ಜ್ಞಾನೇಂದ್ರ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್‌ಗೆ ಸಜ್ಜಾಗಿದೆ. ಸೋಮವಾರ ಎರಡು ಪಕ್ಷದ ಕಾರ್ಯಕರ್ತರು ಒಂದೇ ಸ್ಥಳದಲ್ಲಿ ಸೇರುತ್ತಿದ್ದು ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

ಕರಿಮನೆ ಗ್ರಾಪಂ ವ್ಯಾಪ್ತಿಯ ಕನ್ನಳ್ಳಿ ಗ್ರಾಮದ ಸರ್ವೇ ನಂ.106ರಲ್ಲಿ ಅಕೇಶಿಯಾ ಮರಗಳನ್ನು ಅಕ್ರಮವಾಗಿ ಕಡಿತಲೆ ಮಾಡಿ, 30 ಲಕ್ಷ ರೂ. ಮರಗಳನ್ನು ಒಬ್ಬನೇ ಗುತ್ತಿಗೆದಾರನಿಗೆ ಕೇವಲ 8.5 ಲಕ್ಷ ರೂ.ಗೆ ಮಾರಾಟ ಮಾಡಲಾಗಿದೆ. ಇದಕ್ಕೆ ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರೇ ಹೊಣೆಯಾಗಿದ್ದು, ಇವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಆರೋಪಿಸಿ ನಗರ ಹೋಬಳಿ ಬಿಜೆಪಿ ಅಧ್ಯಕ್ಷ ಎನ್.ವೈ.ಸುರೇಶ್ ನೇತೃತ್ವದಲ್ಲಿ ಕರಿಮನೆ ಗ್ರಾಪಂ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದು ಹೋರಾಟ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನ ಶಾಸಕ ಆರಗ ಜ್ಞಾನೇಂದ್ರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣವನ್ನು ಸೂಕ್ತ ತನಿಖೆ ನಡೆಸಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು.
ಪ್ರತಿಭಟನೆಯ ಮೂರನೇ ದಿನವಾದ ಭಾನುವಾರ ಸಂಸದ ಬಿ.ವೈ.ರಾಘವೇಂದ್ರ ಸ್ಥಳಕ್ಕಾಗಮಿಸಿ ಪ್ರತಿಭಟನಾನಿರತರ ಅಹವಾಲು ಆಲಿಸಿದರು. ಈ ಸಂದರ್ಭದಲ್ಲಿ ಅಕೇಶಿಯಾ ಅಕ್ರಮ ಕಡಿತಲೆ ಪ್ರಕರಣ ಸೂಕ್ತ ತನಿಖೆ ಆಗಬೇಕು. ಈ ಸಂಬಂಧ ಮೇಲಾಧಿಕಾರಿಗಳ ಜತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು. ಗ್ರಾಪಂನಿಂದ ಲಿಖಿತವಾಗಿ ಏನನ್ನು ಗುತ್ತಿಗೆದಾರರಿಗೆ ಕೊಡದಿರಬಹುದು. ಆದರೆ ಆ ವೇಳೆ ಗ್ರಾಪಂನಿಂದ ಗುತ್ತಿಗೆದಾರನೊಂದಿಗೆ ನಡೆದ ದೂರವಾಣಿ ಸಂಭಾಷಣೆ, ಪಂಚಾಯಿತಿಯ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಕ್ರಮಕೈಗೊಳ್ಳಬಹುದು. ಅಲ್ಲದೇ ಹಣ ಯಾರ ಕೈಸೇರಿದೆ ಎಂದು ಪತ್ತೆಗೆ ಕ್ರಮಕೈಗೊಳ್ಳಬೇಕೆಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸಂಸದ ರಾಘವೇಂದ್ರ ಸೂಚಿಸಿದರು.

ಪ್ರತಿಭಟನೆ ಕೈಬಿಡಲು ನಕಾರ
ತಪ್ಪಿತಸ್ಥರ ವಿರುದ್ಧ ಕ್ರಮಕ್ಕಾಗಿ ಸರ್ವ ರೀತಿಯ ಪ್ರಯತ್ನ ಮಾಡುತ್ತೇನೆ. ಮನೆ ಬಿಟ್ಟು ಹಗಲು-ರಾತ್ರಿ ಪ್ರತಿಭಟನೆ ನಡೆಸುವುದು ಸರಿಯಲ್ಲ. ಪ್ರತಿಭಟನೆ ಕೈಬಿಡಿ ಎಂದು ಸಂಸದ ಬಿ.ವೈ.ರಾಘವೇಂದ್ರ ಮನವಿ ಮಾಡಿದರು. ಇದ್ದಕ್ಕೆ ಪ್ರತಿಕ್ರಿಯಿಸಿದ ಪ್ರತಿಭಟನಾನಿರತರು, ಇಲ್ಲ … ಸಾರ್… ನಾವು ಗ್ರಾಪಂ ಅಕ್ರಮದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದೇವೆ. ಇದಕ್ಕೆ ಉತ್ತರ ಕೊಡಬೇಕಾದ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದೀಗ ಅಭಿವೃದ್ಧಿಗೆ ಅಡಚಣೆ ನೆಪ ಹೇಳಿ ಇದೇ ಸ್ಥಳದಲ್ಲೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಪ್ರತಿಭಟನೆ ಕೈಬಿಟ್ಟರೆ ಬೆನ್ನು ತೋರಿಸಿದಂತಾಗುತ್ತದೆ. ಪ್ರಕರಣ ಇತ್ಯರ್ಥ ಆಗುವವರೆಗೂ ನಮ್ಮ ಪ್ರತಿಭಟನೆ ನಡೆಯುತ್ತದೆ. ಕಾಂಗ್ರೆಸ್ ದಬ್ಬಾಳಿಕೆ ನಡೆಸುವ ಸಾಧ್ಯತೆಗಳಿದ್ದು ನಮಗೆ ಸೂಕ್ತ ರಕ್ಷಣೆ ನೀಡಿ ಎಂದು ಮನವಿ ಮಾಡಿದರು.
ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಶಿವಮೊಗ್ಗ ಜಿಪಂ ಉಪಕಾರ್ಯದರ್ಶಿ ಜಯಲಕ್ಷ್ಮೀ, ಸಹಾಯಕ ಕಾರ್ಯದರ್ಶಿ ತಾರಾ ಪ್ರತಿಭಟನಾ ನಿರತರ ಅಹವಾಲು ಆಲಿಸಿದರು. ಪ್ರಮುಖರಾದ ಎನ್.ವೈ.ಸುರೇಶ್, ರಾಜೇಶ್ ಹಿರಿಮನೆ, ಕೆ.ಕೆ.ರಾಮಣ್ಣ, ದೇವು, ಸತೀಶ್, ಸುರೇಶ್ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಇಂದು ಕಿಮ್ಮನೆ, ಆರ್‌ಎಂಎಂ ನೇತೃತ್ವದಲ್ಲಿ ಧರಣಿ
ಅಕೇಶಿಯಾ ಕಡಿತಲೆ ಸಂಬಂಧ ಬಿಜೆಪಿ ಕಾರ್ಯಕರ್ತರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಶಾಸಕ ಆರಗ ಜ್ಞಾನೇಂದ್ರ ಅವರು ಪಂಚಾಯಿತಿ ಅಭಿವೃದ್ಧಿಗೆ ಅಡಚಣೆಯನ್ನುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಸೆ.11ರಂದು ಪ್ರತಿಭಟನೆ ನಡೆಸಲು ಸ್ಥಳೀಯ ಮುಖಂಡರು ಸಜ್ಜಾಗಿದ್ದಾರೆ. ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮುಖಂಡ ಆರ್.ಎಂ.ಮಂಜುನಾಥ ಗೌಡ ನೇತೃತ್ವದಲ್ಲಿ ಕರಿಮನೆ ಗ್ರಾಪಂ ಎದುರು ಪ್ರತಿಭಟನೆ ನಡೆಸುವುದಾಗಿ ಸ್ಥಳೀಯ ಕೈ ಮುಖಂಡರು ತಿಳಿಸಿದ್ದಾರೆ.

ಕರಿಮನೆಯಲ್ಲಿ ಅಕ್ರಮ ಪತ್ತೆಗಾಗಿ ನ್ಯಾಯಯುತ ಹೋರಾಟ ಮಾಡಲಾಗುತ್ತಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷದ ನಾಯಕರು ಪ್ರತಿಭಟನೆಗೆ ಮುಂದಾದರೇ ಶಾಸಕ ಆರಗ ಜ್ಞಾನೇಂದ್ರ ಸಹಿತ ನಾನು ಕೂಡ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ. ಒಂದು ವೇಳೆ ದಬ್ಬಾಳಿಕೆ ನಡೆಸಿದರೆ ಸೂಕ್ತ ಕ್ರಮಕೈಗೊಳ್ಳುವ ಸಂಬಂಧ ಎಸ್ಪಿ ಜತೆ ಮಾತನಾಡುವೆ.ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ