ಸಾಲಿಗ್ರಾಮ: ಚುಂಚನಕಟ್ಟೆ ಗ್ರಾಮದಲ್ಲಿ ವಾಸವಿರುವ ನಿರಾಶ್ರಿತರಿಗೆ ನಿವೇಶನ ಮತ್ತು ಆಶ್ರಯ ಮನೆ ಕಲ್ಪಿಸಿಕೊಡಲು ಹುಣಸೂರು ಉಪ ವಿಭಾಗಾಧಿಕಾರಿ ವಿಜಯಕುಮಾರ್ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ದಾಖಲೆ ಹಾಗೂ ಸ್ಥಳ ಪರಿಶೀಲನೆ ನಡೆಸಿದರು.
ಸುಮಾರು 87 ಕ್ಕೂ ಹೆಚ್ಚು ಗುಡಿಸಲು ಮತ್ತು ಮಣ್ಣಿನ ಮನೆಯಲ್ಲಿ ವಾಸವಿರುವ ಕುಟುಂಬದ ಸದಸ್ಯರೊಂದಿಗೆ ಮಾತನಾಡಿದ ವಿಜಯಕುಮಾರ್, ದಾಖಲೆ ಪರಿಶೀಲಿಸಿ ಅವರ ಜತೆ ಚರ್ಚಿಸಿದರು.
ಅಧಿಕಾರಕ್ಕೆ ಬರುವ ಸರ್ಕಾರಗಳು, ಹೊಸದಾಗಿ ಬರುವ ಡಿಸಿ ಹಾಗೂ ವಿಭಾಗಾಧಿಕಾರಿ, ತಹಸೀಲ್ದಾರ್‌ಗಳು ಬಂದು ಭರವಸೆ ನೀಡಿ ಹೋಗುತ್ತಾರೆ ಅಷ್ಟೆ. 40 ವರ್ಷಗಳಿಂದ ಇದೇ ಸಮಸ್ಯೆ. ನಮಗೆ ಈ ಸಮಸ್ಯೆಯಿಂದ ಮುಕ್ತಿ ಸಿಕ್ಕಿಲ್ಲ. ಇಲ್ಲಿನ ಮಕ್ಕಳಿಗೆ ಶಿಕ್ಷಣ ಸಿಗುತ್ತಿಲ್ಲ. ಮೂಲ ಸೌಕರ್ಯವಿಲ್ಲ ಎಂದು ಸ್ಥಳೀಯ ನಿವಾಸಿಗಳು ವಿಜಯ್‌ಕುಮಾರ್ ಅವರ ಗಮನ ಸೆಳೆದರು. ಸಂತ್ರಸ್ತರ ಮನವಿ ಆಲಿಸಿದ ವಿಜಯ್ ಕುಮಾರ್ ಮಾತನಾಡಿ, ಈ ಬಗ್ಗೆ ವರದಿ ತಯಾರಿಸಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹಾಗೂ ಜಿಲ್ಲಾಧಿಕಾರಿಗೆ ಸಲ್ಲಿಸಲಾಗುವುದು. ಈ ಮೂಲಕ ಶೀಘ್ರವೇ ನಿಮ್ಮ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
40 ವರ್ಷಗಳಿಂದ ನಿವೇಶನ ಮತ್ತು ಆಶ್ರಯ ಮನೆಗಾಗಿ ಕುಟುಂಬಗಳು ಕಣ್ಣೀರಿಡುತ್ತಿವೆ. ಮಳೆ,ಬಿಸಿಲು, ಗಾಳಿ ಎನ್ನದೆ ಜೀವನ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ವರ್ಷಗಳಿಂದ ಗ್ರಾಮ ಪಂಚಾಯಿತಿ ಮತ್ತು ಕಂದಾಯ ಇಲಾಖೆಗೆ ಸಾಕಷ್ಟು ಅರ್ಜಿಗಳನ್ನೂ ನೀಡಿದರೂ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ಈ ವಿಚಾರವಾಗಿ ದಲಿತ ಸಂಘರ್ಷ ಸಮಿತಿ ಸೇರಿದಂತೆ ಹಲವು ದಲಿತ ಪರ ಸಂಘಟನೆಗಳು ನಿರಂತರ ಹೋರಾಟ ಮಾಡಿಕೊಂಡು ಬರುತ್ತಿವೆ. ಆದರೆ 40 ವರ್ಷಗಳಿಂದಲೂ ಈ ಕುಟುಂಬಗಳಿಗೆ ಸೂರು ಕಲ್ಪಿಸಿಕೊಡಲು ಸರ್ಕಾರಗಳು ಮುಂದಾಗುತ್ತಿಲ್ಲ. ಇದೀಗ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಕುಟುಂಬಗಳಿಗೆ ಸೂರು ಕಲ್ಪಿಸಲಿದೆ ಎಂಬ ನಂಬಿಕೆ ಇದೆ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಹೆಬ್ಬಾಳ್ ದಿವಾಕರ್ ಹೇಳಿದರು.
ಉಪ ವಿಭಾಗೀಯ ಜಾಗೃತಿ ಸಮಿತಿ ಸದಸ್ಯ ನಿಂಗರಾಜ ಮಲ್ಲಾಡಿ ಮಾತನಾಡಿ, ಈ ಕುಟುಂಬಗಳಿಗೆ ಆಶ್ರಯ ಮನೆ ದೊರಕಿಸಿಕೊಡಲು ಈ ಹಿಂದೆ ಡಿಸಿ ಕಚೇರಿಯಲ್ಲಿ ಚರ್ಚೆ ಮಾಡಿದ್ದೇವೆ. ಈ ಹಿಂದೆ ಇದ್ದ ಡಿಸಿ ಅವರು ಸೌಲಭ್ಯ ಕಲ್ಪಿಸಿಕೊಡಲು ಎಲ್ಲ ವ್ಯವಸ್ಥೆಗಳನ್ನು ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದರು. ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷೃದಿಂದ ಮೇಲ್ಮಟ್ಟದ ಅಧಿಕಾರಿಗಳಿಗೆ ವಸ್ತುನಿಷ್ಠ ಮಾಹಿತಿ ಸಿಗುತ್ತಿಲ್ಲ. ಹಾಗಾಗಿ ಕುಟುಂಬಸ್ಥರು ಪ್ರತಿವರ್ಷ ವಂಚಿತರಾಗುತ್ತಿದ್ದಾರೆ. 94ಸಿ ಯೋಜನೆ ಅಡಿ ನಿವೇಶನ ಮತ್ತು ಆಶ್ರಯ ಮನೆಗಾಗಿ 58 ನಿರ್ಗತಿಕ ಕುಟುಂಬಗಳು ಅರ್ಜಿ ಸಲ್ಲಿಸಿದರೂ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷೃ ಮಾಡುತ್ತಿದ್ದಾರೆ ಎಂದು ದೂರಿದರು.
ಇತ್ತೀಚೆಗೆ ಮೈಸೂರು ಜಿಲ್ಲಾ ಪಂಚಾಯಿತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಅವರ ಜನತಾದರ್ಶನ ಸಭೆಯಲ್ಲಿ ಇಲ್ಲಿನ ಕುಟುಂಬಗಳಿಗೆ ಸೌಲಭ್ಯ ಕಲ್ಪಿಸಬೇಕೆಂದು ದಲಿತ ಸಂಘರ್ಷ ಸಮಿತಿ ಸಚಿವರಿಗೆ ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಮಾಸಮ್ಮ, ಮಂಜುನಾಥ್, ಕುಮಾರ್, ರವಿ, ಸೌಮ್ಯಾ, ರಾಮು, ಬಸವರಾಜು, ಮಂಜುಳಮ್ಮ ಇನ್ನಿತರರು ಇದ್ದರು.