ಜಿಲ್ಲೆ

ಮಕ್ಕಳ ಯೋಗಕ್ಷೇಮ ವಿಚಾರಿಸಿದ ಎಸಿ

ಶಿರಸಿ: ನಗರದ ಮರಾಠಿಕೊಪ್ಪದಲ್ಲಿರುವ ಸಹಾಯ ಟ್ರಸ್ಟ್‌ನ ವಿಶೇಷ ದತ್ತು ಮಕ್ಕಳ ಕೇಂದ್ರಕ್ಕೆ ಉಪವಿಭಾಗಾಧಿಕಾರಿ ಕೆ. ಕಾವ್ಯಾರಾಣಿ ಗುರುವಾರ ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.

ಸಮಾಜ ಸೇವಕ ಸತೀಶ ರಾಮಾ ಶೆಟ್ಟಿ ಮುಂದಾಳತ್ವದಲ್ಲಿ ನಡೆಸಲಾಗುತ್ತಿರುವ ಸಹಾಯ ಟ್ರಸ್ಟ್, ಹೆತ್ತವರಿಗೆ ಬೇಡವಾದ ಮಕ್ಕಳನ್ನು ತಂದು ಸಲಹುವ ಮೂಲಕ ಮಾದರಿಯಾಗಿದ್ದಾರೆ. ಮಕ್ಕಳ ಸಲುವಾಗಿ ಟ್ರಸ್ಟ್‌ನಿಂದ ಲಿಟ್ಲ ಫ್ಲವರ್ ಎಂಬ ಹೆಸರಿನ ಶಾಲೆಯನ್ನೂ ಆರಂಭಿಸಿದೆ. ಸ್ವ ಸಹಾಯ ಸಂಘಗಳ ಮೂಲಕ ಜಾಗೃತಿ, ಬೀದಿ ನಾಟಕ, ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಸತತವಾಗಿ ನಡೆಸಿಕೊಂಡು ಬಂದಿದೆ. ಹುಟ್ಟಿದ ಬಳಿಕ ಅನಾಥರಾಗಿದ್ದರೂ ಅವರನ್ನು ಸಹಾಯ ಟ್ರಸ್ಟ್ ಪಡೆದ ಬಳಿಕ ಉಜ್ವಲ ಭವಿಷ್ಯ ರೂಪಿಸುವತ್ತ ಸಹಾಯ ಟ್ರಸ್ಟ್ ಕಾರ್ಯ ನಿರ್ವಹಿಸುತ್ತಿದೆ.

8ಕ್ಕೂ ಅಧಿಕ ಮಕ್ಕಳನ್ನು ಅನಿವಾಸಿ ಭಾರತೀಯರು ದತ್ತು ಪಡೆದಿದ್ದಾರೆ. 25ಕ್ಕೂ ಅಧಿಕ ಅನಾಥ ಮಕ್ಕಳನ್ನು ಪೋಷಿಸಿ ದತ್ತು ನೀಡಿದೆ. ಸದ್ಯ ಜಿಲ್ಲೆಯ ಏಕೈಕ ಅನಾಥ ಮಕ್ಕಳ ದತ್ತು ಕೇಂದ್ರವಾಗಿರುವ ಸಹಾಯ ಟ್ರಸ್ಟ್ ನ ಕಾರ್ಯ ವೈಖರಿ ಪರಿಶೀಲಿಸಿದ ಉಪವಿಭಾಗಾಧಿಕಾರಿ ಪ್ರಶಂಸಿಸಿದರು. ದತ್ತು ಮಕ್ಕಳನ್ನು ಪಡೆಯುವ ಮತ್ತು ನೀಡುವ ಪ್ರಕ್ರಿಯೆ ಕುರಿತು ವಿಚಾರಣೆಯನ್ನು ಸಹಾಯ ಟಸ್ಟ್ ಸಿಬ್ಬಂದಿಯೊಂದಿಗೆ ಚರ್ಚಿಸಿದರು.

ದತ್ತು ಕೇಂದ್ರದ ಅಧ್ಯಕ್ಷ ಸತೀಶ್ ರಾಮಾ ಶೆಟ್ಟಿ ಅವರು ಮಕ್ಕಳು ದತ್ತು ಕೇಂದ್ರಕ್ಕೆ ಬರುವುದರ ಬಗ್ಗೆ ಹಾಗೂ ಅವರ ಆರೈಕೆ ಬಗ್ಗೆ ವಿವರಿಸಿದರು. ಸಿಡಿಪಿಒ ವೀಣಾ ಶಿರ್ಸಿಕರ್ ಇದ್ದರು.