ಮಂಡ್ಯ: ತರಗತಿ ಬಹಿಷ್ಕರಿಸಿ ಮುಷ್ಕರ ನಿರತರಾಗಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಯಚಾಮರಾಜೇಂದ್ರ ಒಡೆಯರ್ ವೃತ್ತದಿಂದ ಜಮಾಯಿಸಿದ ವಿದ್ಯಾರ್ಥಿಗಳು ಮೆರವಣಿಗೆ ಹೊರಟು ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರು ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದರಿಂದಾಗಿ ಪದವಿ ಕಾಲೇಜುಗಳಲ್ಲಿ ತರಗತಿಗಳು ನಡೆಯದೆ ವಿದ್ಯಾರ್ಥಿಗಳ ಪಠ್ಯ ಚಟುವಟಿಕೆಗೆ ಹಿನ್ನಡೆಯಾಗುತ್ತಿದೆ. ಕೆಲವೊಂದು ವಿಶ್ವವಿದ್ಯಾಲಯಗಳು ಸೆಮಿಸ್ಟರ್ ಪರೀಕ್ಷೆಯನ್ನು ನಡೆಸುವ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಆದರೆ ತರಗತಿ ಸರಿಯಾಗಿ ನಡೆಯದೆ ವಿದ್ಯಾರ್ಥಿಗಳು ಪರೀಕ್ಷೆ ಹೇಗೆ ಬರೆಯಲು ಸಾಧ್ಯ ಎಂಬ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿದೆ ಎಂದರು.
ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಈಡೇರಿಸಿ ಗೌರವಯುತ ಜೀವನವನ್ನು ಸಾಧ್ಯವಾಗಿಸುವುದು ಸರ್ಕಾರದ ಕರ್ತವ್ಯವಾಗಿದೆ. ಆ ನಿಟ್ಟಿನಲ್ಲಿ ಅತಿಥಿ ಉಪನ್ಯಾಸಕರಿಗೆ ಯುಜಿಸಿ ನಿಯಮಾವಳಿ ಪ್ರಕಾರ ವೇತನ ನೀಡಬೇಕು. ಸರ್ಕಾರಿ ನೌಕರರಿಗೆ ನೀಡುವಂತೆ ಪ್ರತಿ ತಿಂಗಳು ವೇತನ ಪಾವತಿಸಬೇಕು. ಸಮಸ್ಯೆಗೆ ಶಾಶ್ವತ ಪರಿಹಾರವಾಗಿ ರಾಜ್ಯದ ಕಾಲೇಜುಗಳಲ್ಲಿ ಖಾಲಿ ಇರುವ ಉಪನ್ಯಾಸಕ ಹುದ್ದೆಯನ್ನು ಭರ್ತಿ ಮಾಡಲು ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಒತ್ತಾಯಿಸಿದರು.
ಅತಿಥಿ ಉಪನ್ಯಾಸಕರು ಕಾನೂನಾತ್ಮಕವಾಗಿ ಹೋರಾಟ ಮುಂದುವರಿಸುವ ಮೂಲಕ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಕೂಡಲೇ ತರಗತಿ ಬಹಿಷ್ಕಾರವನ್ನು ಹಿಂಪಡೆದು ಪಾಠ ಪ್ರವಚನ ಆರಂಭಿಸಬೇಕು. ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಜತೆಗೆ ಮಾತುಕತೆ ನಡೆಸಿ ಬೇಡಿಕೆಯನ್ನು ಸಕಾರಾತ್ಮಕವಾಗಿ ಪರಿಶೀಲಿಸಿ, ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಮುಷ್ಕರ ಕೊನೆಗೊಳಿಸಲು ಮನವೊಲಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ನಗರ ಸಂಘಟನಾ ಕಾರ್ಯದರ್ಶಿ ಚಂದು,, ಜಿಲ್ಲಾ ಸಂಚಾಲಕಿ ಸುಗುಣ, ನೀತಂ, ನವ್ಯಶ್ರೀ, ಹರ್ಷ ಇತರರಿದ್ದರು.