ಜಿಲ್ಲೆ

ವಿವೇಕ ಜಯಂತಿಗೆ ಹೊಸ ರೂಪ

ಮಂಗಳೂರು: ರಾಜ್ಯದಲ್ಲಿ ವಿವೇಕಾನಂದ ಜಯಂತಿಗೆ ಹೊಸರೂಪ ನೀಡಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಶುಕ್ರವಾರ ಎಬಿವಿಪಿ 39ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ರಾಜ್ಯದ ಯುವಜನರ ಕೌಶಲಾಭಿವೃದ್ಧಿ ಉದ್ದೇಶದಿಂದ ‘ಯೂತ್ ಎಂಪವರ್‌ಮೆಂಟ್ ಪ್ಲಾಟ್‌ಫಾರಂ’ ರೂಪಿಸಲಾಗಿದೆ. ಈ ಮೂಲಕ ಉದ್ಯೋಗಾವಕಾಶ ಹೆಚ್ಚಿಸುವುದು, ಸೂಕ್ತ ಶಿಕ್ಷಣ ಆರಿಸಿಕೊಳ್ಳಲು ನೆರವು ನೀಡಲಾಗುವುದು ಎಂದರು.

ಎಲ್ಲ ಶಾಲೆಗಳಲ್ಲೂ ಕೌನ್ಸೆಲರ್‌ಗಳನ್ನು ನೇಮಿಸಿ, ವಿದ್ಯಾರ್ಥಿಗಳಿಗೆ ಶಿಕ್ಷಣ ಅವಕಾಶಗಳು, ಶಿಕ್ಷಣ ಸಾಲ, ಉದ್ಯೋಗಾವಕಾಶಗಳ ತಿಳಿವಳಿಕೆ ನೀಡಲಾಗುವುದು. ಇಂಟರ್ನ್‌ಶಿಪ್, ಕೌಶಲ ತರಬೇತಿಗೂ ಈ ಪ್ಲಾಟ್‌ಫಾರಂ ಬಳಕೆ ಮಾಡಲಾಗುವುದು ಎಂದರು.

ಎಬಿವಿಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಆಶಿಶ್ ಚೌಹಾಣ್ ಮಾತನಾಡಿ, ಹಿಂದೆ ದೇಶ ವಿಭಜಿಸುವ ಮಾತನಾಡುತ್ತಿದ್ದವರು ಈಗ ರಾಷ್ಟ್ರಧ್ವಜ ಹಿಡಿದು ಜನಗಣಮನ ಹೇಳುವವರೆಗೆ ಬಂದಿರುವುದು ಸ್ವಾಗತಾರ್ಹ. ಆದರೆ ಇಂತಹ ನಕ್ಸಲ್‌ಪರ, ಜಿಹಾದ್ ಪರ ಇರುವವರ ತಂತ್ರಗಾರಿಕೆ ಆಗಾಗ ಬದಲಾಗುತ್ತದೆ. ಇದನ್ನು ವಿದ್ಯಾರ್ಥಿ ಶಕ್ತಿ ಎಚ್ಚರಿಕೆಯಿಂದ ಗಮನಿಸಿ ಜನಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ನಾಗಾಲೆಂಡ್ ಮಾಜಿ ರಾಜ್ಯಪಾಲ ಹಾಗೂ ಎಬಿವಿಪಿ ಮಾಜಿ ರಾಷ್ಟ್ರಾಧ್ಯಕ್ಷ ಪದ್ಮನಾಭ ಆಚಾರ್ಯ, ಪೌರತ್ವ ತಿದ್ದುಪಡಿ ಕಾಯ್ದೆ, ಜನಧನ್ ಮಸೂದೆ ಸಹಿತ ಹಲವಾರು ಕ್ರಾಂತಿಕಾರಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಂಡಿರುವ ಪ್ರಧಾನಿ ಮೋದಿ ಅವರಿಗೆ ಯುವಜನರು ಬೆನ್ನೆಲುಬಾಗಿ ನಿಲ್ಲಬೇಕಾದ ಅವಶ್ಯಕತೆ ಇದೆ, ಪೌರತ್ವ ತಿದ್ದುಪಡಿ ಕಾಯ್ದೆಗೆ ಪರವಾಗಿದ್ದೇವೆ ಎನ್ನುವ ಧ್ವನಿ ಗಟ್ಟಿಯಾಗಿ ಮೊಳಗಬೇಕಿದೆ ಎಂದರು.

ಪದ್ಮಶ್ರೀ ಪುರಸ್ಕೃತ ಅಕ್ಷರ ಸಂತ ಹರೇಕಳ ಹಾಜಬ್ಬ ಅವರನ್ನು ಉಪಮುಖ್ಯಮಂತ್ರಿ ಅಶ್ವತ್ಥನಾರಾಯಣ, ಮಾಜಿ ರಾಜ್ಯಪಾಲ ಪಿ.ಬಿ. ಆಚಾರ್ಯ ಮೊದಲಾದವರು ಸನ್ಮಾನಿಸಿದರು.

ಸ್ವಾಗತ ಸಮಿತಿ ಅಧ್ಯಕ್ಷ ಕೆ.ಸಿ.ನಾಕ್ ಸ್ವಾಗತಿಸಿದರು. ಸಮಿತಿ ಸಂಚಾಲಕ ಕೇಶವ ಬಂಗೇರ ಅತಿಥಿಗಳನ್ನು ಪರಿಚಯಿಸಿದರು. ಪರಿಷತ್ ರಾಜ್ಯ ಅಧ್ಯಕ್ಷ ಡಾ.ಅಲ್ಲಮಪ್ರಭು ಗುಡ್ಡ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯೆ ಮಹಾಲಕ್ಷ್ಮಿ ಭೂಷಿ, ಸ್ವಾಗತ ಸಮಿತಿ ಸಹಸಂಚಾಲಕ ಶ್ರೀನಿಧಿ ಪಾಲ್ಗೊಂಡರು. ಸ್ವಾಗತ ಸಮಿತಿ ಕಾರ್ಯದರ್ಶಿ ಸಿಎ ಶಾಂತಾರಾಮ ಶೆಟ್ಟಿ ವಂದಿಸಿದರು. ರಾಷ್ಟ್ರೀಯ ಕಾರ್ಯದರ್ಶಿ ಹರ್ಷನಾರಾಯಣ ಕಾರ್ಯಕ್ರಮ ನಿರೂಪಿಸಿದರು.

ಎಬಿವಿಪಿ ಮರೆಯಲಾರೆ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್.ಯಡಪಡಿತ್ತಾಯ, ಹಿಂದೆ ತಾನು ಪರೀಕ್ಷಾಂಗ ಕುಲಸಚಿವನಾಗಿದ್ದಾಗ ಪರೀಕ್ಷೆ ಮೌಲ್ಯಮಾಪನವನ್ನು ಪೂರ್ಣ ಗಣಕೀಕರಣಗೊಳಿಸಲು ಮುಂದಾಗಿದ್ದೆ. ಅದಕ್ಕೆ ಅನೇಕರಿಂದ ಬೆದರಿಕೆ ಬಂದಿತ್ತು. ಅದನ್ನೆಲ್ಲ ಬದಿಗೊತ್ತಿ ಮುಂದುವರಿಯಲು ಆಗ ಎಬಿವಿಪಿ ನೀಡಿದ್ದ ಸಹಕಾರ ಮರೆಯಲಾರೆ ಎಂದು ನೆನಪಿಸಿಕೊಂಡರು.

ಎಬಿವಿಪಿ ಹೋರಾಟಗಳನ್ನು ಮಾಡಿ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಯಶಸ್ವಿಯಾಗಿದೆ. ಅಗತ್ಯ ಬಿದ್ದಾಗ ಪೊಲೀಸ್ ಲಾಠಿಗೂ ಹಿಂಜರಿದಿಲ್ಲ. ಈ ಸಂಘಟನೆ ಕೇವಲ ಶಿಕ್ಷಣ ವ್ಯವಸ್ಥೆಗೆ ಸೀಮಿತವಾಗದೆ ಸಾಮಾಜಿಕ, ರಾಜಕೀಯ, ಪರಿಸರ ಸಮಸ್ಯೆಗಳನ್ನೂ ಕೈಗೆತ್ತಿಕೊಂಡಿದೆ. - ಡಾ.ಸಿ.ಎನ್.ಅಶ್ವತ್ಥನಾರಾಯಣ ಉಪ ಮುಖ್ಯಮಂತ್ರಿ