ಉಡುಪಿ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಉಡುಪಿ ನಗರ ವತಿಯಿಂದ ರಾಜ್ಯ ಸರ್ಕಾರ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಆಲಿಸಬೇಕು. ತರಗತಿಗಳು ಸುಗಮವಾಗಿ ನಡೆಸುವಂತೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ನಗರ ಕಾರ್ಯದರ್ಶಿ ಶ್ರೀವತ್ಸ ಮಾತನಾಡಿ, ಅತಿಥಿ ಉಪನ್ಯಾಸಕರ ಸಮಸ್ಯೆಯಿಂದಾಗಿ ನಮ್ಮ ಮಂಗಳೂರು ಯುನಿವರ್ಸಿಟಿಯ ಕೆಲವು ಕಾಲೇಜುಗಳಲ್ಲಿ ನಾಲ್ಕು ತಿಂಗಳಲ್ಲಿ ನಡೆಯಬೇಕಾದ ಪಠ್ಯವನ್ನು ಎರಡು ತಿಂಗಳಲ್ಲಿ ಮುಗಿಸುತ್ತಿದ್ದಾರೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ ಬಹಳ ಸಮಸ್ಯೆಗಳಾಗುತ್ತಿದೆ . ಶಿಕ್ಷಕರ ಬೇಡಿಕೆಯನ್ನು ಈಡೇರಿಸಿ ಶೀಘ್ರ ಪರಿಹಾರ ದೊರಕಿಸಿ, ಖಾಲಿ ಇರುವ ಸ್ಥಾನಗಳನ್ನು ಬಡ್ತಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಪರಿಷತ್ ಡಿಸಿ ಕಚೇರಿ ಮುತ್ತಿಗೆಗೆ ಪ್ರಯತ್ನವನ್ನು ಮಾಡಿತು. ನಂತರ ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಸ್ಥಳಕ್ಕೆ ಬಂದು ಮನವಿಯನ್ನು ಸ್ವೀಕರಿಸಿದರು.
ಪ್ರತಿಭಟನೆಯಲ್ಲಿ ತಾಲೂಕು ಸಂಚಾಲಕ ಅಜಿತ್ ಜೋಗಿ, ನಗರ ಸಹಕಾರ್ಯದರ್ಶಿ ಕಾರ್ತಿಕ್, ನಗರ ವಿದ್ಯಾರ್ಥಿನಿ ಪ್ರಮುಖ್ ಸಂಹಿತಾ ಸಹ ಪ್ರಮುಖ್ ಕೃತಿ ಮತ್ತು ಪ್ರಮುಖರಾದ ಸ್ವಸ್ತಿಕ್, ನವೀನ್, ಮಂಗಳಗೌರಿ, ಪ್ರಶ್ಮ, ಶ್ರೀಹರಿ, ಅನಂತಕೃಷ್ಣ, ಆದಿತ್ಯ, ಸುಮುಖ, ಮಾಣಿಕ್ಯ, ರವಿಚಂದ್ರ ಉಪಸ್ಥಿತರಿದ್ದರು.