ಜಿಲ್ಲೆ

ಸೆ. 26ರಂದು ವಿವಿಗಳ ಸಮಸ್ಯೆ ಬಗೆಹರಿಸಲು ಎಬಿವಿಪಿ ಪ್ರತಿಭಟನೆ

Mangaluru - Hariprasad Rai



ಮಂಗಳೂರು : ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಿ ಸೆ. 26ರಂದು ರಾಜ್ಯದ ಎಲ್ಲ ವಿಶ್ವ ವಿದ್ಯಾನಿಲಯ ವ್ಯಾಪ್ತಿಯಲ್ಲಿ ಹೋರಾಟ ನಡೆಸಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನಿರ್ಧರಿಸಿದೆ. ಮಂಗಳೂರಿನಲ್ಲಿ ನಡೆದ ಎಬಿವಿಪಿ ಕರ್ನಾಟಕ ದಕ್ಷಿಣ ಪ್ರಾಂತದ ರಾಜ್ಯ ಕಾರ್ಯಕಾರಿಣಿ ಸಭೆ ತೀರ್ಮಾನಿಸಿದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಪ್ರವೀಣ್ ಎಚ್.ಕೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳೂರಿನಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯದ ಶೈಕ್ಷಣಿಕ ಪರಿಸ್ಥಿತಿ ಮತ್ತು ವರ್ತಮಾನ ಪರಿಸ್ಥಿತಿ ಕುರಿತು ಎರಡು ಕರಡು ನಿರ್ಣಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹಾಸ್ಟೆಲ್ ಸಂಖ್ಯೆಯನ್ನು ಹೆಚ್ಚಿಸಬೇಕು. ಸಮರ್ಪಕವಾಗಿ ವಿದ್ಯಾರ್ಥಿ ವೇತನ ವಿತರಿಸುವಂತೆ ಹಾಗೂ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಯಿತು ಎಂದು ಅವರು ತಿಳಿಸಿದರು.
ಎನ್‌ಇಪಿ ಹಾಗೂ ಎಸ್‌ಇಪಿ ಕುರಿತು ಇರುವ ಗೊಂದಲವನ್ನು ಸರ್ಕಾೃ ನಿವಾರಿಸಿ ವಿದ್ಯಾರ್ಥಿಗಳಿಗೆ ಸೂಕ್ತ ಆಯ್ಕೆಗೆ ಅವಕಾಶ ಕಲ್ಪಿಸಬೇಕು. ಸರ್ಕಾರದ ವಿಳಂಬ ನೀತಿಯಿಂದಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದು ಸಮಸ್ಯೆಯನ್ನು ಶೀಘ್ರ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.
ಹೆಣ್ಣು ಮಕ್ಕಳಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಮಿಷನ್ ಸಾಹಸಿ ಕರಾಟೆ ಕಾರ್ಯಕ್ರಮವನ್ನು ಆಯೋಜಿಸಲು ನಿರ್ಣಯಿಸಲಾಗಿದೆ. ಈ ಬಾರಿಯ ರಾಜ್ಯ ಸಮ್ಮೇಳನ ಶಿವಮೊಗ್ಗದಲ್ಲಿ ಹಾಗೂ ವಿದ್ಯಾರ್ಥಿ ಸಂಸ್ಕೃತಿ ಚಳುವಳಿ ಮೈಸೂರಿನಲ್ಲಿ ಆಯೋಜಿಸಲು
ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು. ಎಬಿವಿಪಿ ವಿಭಾಗ ಸಂಚಾಲಕರಾದ ಗಣೇಶ್ ಪೂಜಾರಿ, ಮಂದಾರ, ಜಿಲ್ಲಾ ಸಂಚಾಲಕ ಸುಮಿತ್ ಶೆಟ್ಟಿ ಉಪಸ್ಥಿತರಿದ್ದರು.
............................