ಜಿಲ್ಲೆ

ಆಹಾರ ಇಲಾಖೆ ಅಧಿಕಾರಿಯಿಂದ ಅಧಿಕಾರ ದುರ್ಬಳಕೆ: ಟಿ.ಕೃಷ್ಣಪ್ಪ ಆರೋಪ

ಹಾಸನ: ನ್ಯಾಯಬೆಲೆ ಅಂಗಡಿಗಳನ್ನು ತಿಂಗಳು ಪೂರ್ತಿ ತೆಗೆದಿಲ್ಲ ಎಂಬುದಕ್ಕೆ ಕಾರಣ ಕೇಳಿ ಆಹಾರ ಇಲಾಖೆಯ ಜಂಟಿ ನಿರ್ದೇಶಕರು ಜಿಲ್ಲೆಯ 490 ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ಉದ್ದೇಶಪೂರ್ವಕ ನೋಟಿಸ್ ನೀಡಿದ್ದಾರೆ ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ.ಕೃಷ್ಣಪ್ಪ ಗಂಭೀರವಾಗಿ ಆರೋಪಿಸಿದರು.

ಕಳೆದ ತಿಂಗಳಲ್ಲಿ 10 ದಿನದೊಳಗೆ ಪಡಿತರ ಧಾನ್ಯಗಳನ್ನು ವಿತರಣೆ ಮಾಡಿ ಉಳಿದ 20 ದಿನಗಳು ಬಾಗಿಲು ಹಾಕಿದ್ದಾರೆ ಎಂಬ ಆರೋಪದ ಮೇಲೆ 490 ಅಂಗಡಿಗಳಿಗೆ ನೋಟಿಸ್ ನೀಡಿದ್ದಾರೆ. ಇದು ಖಂಡನೀಯ. ಇಡೀ ರಾಜ್ಯದಲ್ಲಿ ಇಲ್ಲದಂತಹ ಕಾನೂನು ಹಾಸನ ಜಿಲ್ಲೆಯಲ್ಲಿದೆ. 250 ಕಾರ್ಡ್‌ದಾರರಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಇಷ್ಟು ಜನರಿಗೂ ಕೇವಲ ಮೂರು ದಿನದಲ್ಲಿ ಪಡಿತರ ವಿತರಣೆ ಮಾಡುತ್ತಾರೆ. ಎಲ್ಲ ಕಾರ್ಡ್‌ದಾರರಿಗೆ ಪಡಿತರ ನೀಡಿದ ಮೇಲೂ ಆತ ಬಾಗಿಲು ತೆರೆದು ಏನು ಮಾಡಬೇಕು. ಇವರು ನೀಡುವ ಪ್ರೋತ್ಸಾಹಧನದಿಂದ ನಮ್ಮ ಜೀವನ ನಡೆಸಲು ಸಾಧ್ಯವಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಮಗೆ ಕೇವಲ 5-6 ಸಾವಿರ ರೂ. ಕಮಿಷನ್ ಸಿಗುತ್ತದೆ. ಇದರಲ್ಲಿ ಜೀವನ ನಿರ್ವಹಣೆ ಮಾಡಲು ಸಾಧ್ಯವೇ? ನಾವು ಒಂದು ವೇಳೆ ತಪ್ಪು ಮಾಡಿದ್ದರೆ ಕ್ರಮ ಕೈಗೊಳ್ಳಲಿ ಅಥವಾ ಸರಿಯಾಗಿ ಪದಾರ್ಥ ವಿತರಣೆ ಮಾಡದಿದ್ದರೆ ಅಗತ್ಯ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ನೋಟಿಸ್ ನೀಡಿ ನಮಗೆ ತೊಂದರೆ ಕೊಡುವ ಅಗತ್ಯವಾದರೂ ಏನಿದೆ? ಹಾಸನ ಜಿಲ್ಲೆಯ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಬಿ.ಅರುಣ್‌ಕುಮಾರ್ ಸಂಗಾವಿ ಅವರು ನ್ಯಾಯಬೆಲೆ ಅಂಗಡಿ ಮಾಲೀಕರು ಯಾವುದೇ ರೀತಿ ತಪ್ಪು ಮಾಡದಿದ್ದರೂ ಕೂಡ ವಿನಾಃಕಾರಣ ನೋಟಿಸ್ ನೀಡಿದ್ದಾರೆ. ಇದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.

ನೋಟಿಸ್‌ಗೆ ಉತ್ತರ ನೀಡದಿದ್ದರೆ ತಮ್ಮ ಠೇವಣಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ತಿಳಿಸಿದ್ದಾರೆ. ಹಣ ನೀಡದ ವಿತರಕರ ಮೇಲೆ ಈಗಾಗಲೇ ಕೆಲ ಮಾಲೀಕರಿಗೆ 50 ರಿಂದ 60 ಸಾವಿರ ರೂ. ವರೆಗೆ ದಂಡವನ್ನೂ ಹಾಕಿದ್ದಾರೆ. ಆಹಾರ ಇಲಾಖೆ ಅಧಿಕಾರಿ ಪಡಿತರ ವಿತರಕರೊಂದಿಗೆ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಜಿಲ್ಲಾಡಳಿತ ಮತ್ತು ಸರ್ಕಾರ ಇಂತಹ ಅಧಿಕಾರಿಯನ್ನು ಅಮಾನತ್ತು ಮಾಡಬೇಕು. ತಕ್ಷಣವೇ ಜಿಲ್ಲಾಧಿಕಾರಿ ಈ ನೋಟಿಸ್ ಹಿಂಪಡೆಯಬೇಕು. ಸರಿ ತಪ್ಪುಗಳನ್ನು ಪರಾಮರ್ಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಚನ್ನಕೇಶವೇಗೌಡ, ಪದಾಧಿಕಾರಿಗಳಾದ ದಾಮೋದರ, ಮೇಘನಾ, ಜಯಣ್ಣ, ಶ್ರೀಕಂಠಯ್ಯ ಇತರರು ಇದ್ದರು.

ತಿಂಗಳಿಗೆ ಇಂತಿಷ್ಟು ಹಣ ನಿಗದಿ ಆರೋಪ

ಆಹಾರ ಇಲಾಖೆ ಜಂಟಿ ನಿರ್ದೇಶಕರಾಗಿ ಜಿಲ್ಲೆಗೆ ಬಂದು ಒಂದೂವರೆ ವರ್ಷವಾಗಿರುವ ಅರುಣ್‌ಕುಮಾರ್ ಸಂಗಾವಿ ಅವರು ಜಿಲ್ಲೆಯ ನ್ಯಾಯಬೆಲೆ ಅಂಗಡಿಗಳ ಮಾಲೀಕರಿಗೆ ಕಾರ್ಡ್‌ಗಳ ಆಧಾರದ ಮೇಲೆ ತಿಂಗಳಿಗೆ ಇಂತಿಷ್ಟು ಎಂದು ಮಾಮೂಲಿ ನಿಗದಿ ಮಾಡಿದ್ದು, ಅದನ್ನು ಕೊಡದೆ ಇದ್ದಾಗ ಈ ರೀತಿ ಕಿರುಕುಳ ನೀಡುತ್ತಾರೆ. ಶಿರಸ್ತೇದಾರ ಮತ್ತು ಅಧಿಕಾರಿಗಳನ್ನು ಬಿಟ್ಟು ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಕೃಷ್ಣಪ್ಪ ಅರವು ಗಂಭೀರವಾಗಿ ಆರೋಪಿಸಿದರು.

ಜಿಲ್ಲಾಡಳಿತಕ್ಕೆ ಮನವಿ

ಜಂಟಿ ನಿರ್ದೇಶಕ ಅರುಣ್‌ಕುಮಾರ್ ಸಿಂಗಾವಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ರಾಜ್ಯ ಮತ್ತು ಜಿಲ್ಲೆಯ ಪಡಿತರ ವಿತರಕರ ಸಂಘದವರು ಮಂಗಳವಾರ 500ಕ್ಕೂ ಹೆಚ್ಚು ಪಡಿತರ ವಿತರಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ನಗರದ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ನೂರಾರು ಪಡಿತರ ವಿತರಕರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಕೆಲ ಕಾಲ ಪ್ರತಿಭಟನೆ ನಡೆಸಿದ ಬಳಿಕ ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಅವರಿಗೆ ಮನವಿ ಸಲ್ಲಿಸಿ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಚರ್ಚೆ

ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಡಿಸಿ ಅವರನ್ನು ಭೇಟಿಯಾಗಿ ತಮ್ಮ ಸಮಸ್ಯೆಯನ್ನು ತೆರೆದಿಟ್ಟರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಆಹಾರ ಇಲಾಖೆಯ ಅಧಿಕಾರಿ ಅರುಣ್‌ಕುಮಾರ್ ಸಿಂಗಾವಿ ಅವರನ್ನು ಕಚೇರಿಗೆ ಕರೆಸಿ ಸಂಘಟನೆಯವರ ಸಮ್ಮುಖದಲ್ಲಿ ಚರ್ಚೆ ನಡೆಸಿದರು. ಜತೆಗೆ ಆಗಿರುವ ಸಮಸ್ಯೆಯ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ್ದಾರೆ.