ಮಂಡ್ಯ: ಪೊಲೀಸರ ಕುಮ್ಮಕ್ಕಿನಿಂದ ಗೂಂಡಾಗಳ ಮೂಲಕ ಮದ್ದೂರು ತಾಲೂಕು ಪಂಚಾಯಿತಿಗೆ ಸೇರಿದ ಮಳಿಗೆಯನ್ನು ಬಲವಂತವಾಗಿ ಖಾಲಿ ಮಾಡಿಸಿ ದೌರ್ಜನ್ಯ ಮಾಡಲಾಗಿದೆ ಎಂದು ನೊಂದ ಕುಟುಂಬ ನಗರದ ಜಿಲ್ಲಾ ಪಂಚಾಯತಿ ಕಚೇರಿ ಎದುರು ಪ್ರತಿಭಟಿಸಿತು.
ಚಾಮನಹಳ್ಳಿ ಗ್ರಾಮದ ಚೆನ್ನಯ್ಯ ಎಂಬುವರ ಮಗ ರಾಚಯ್ಯ ತಮ್ಮ ಕುಟುಂಬದ ಜತೆಗೂಡಿ ಧರಣಿ ನಡೆಸಿ ಜಿಪಂ ಸಿಇಒ ಹಾಗೂ ಜಿಲ್ಲಾ ಎಸ್ಪಿಗೆ ಮನವಿ ಸಲ್ಲಿಸಿದರು. ಮದ್ದೂರು ಪಟ್ಟಣದ ತಾಪಂ ಆವರಣದಲ್ಲಿ ನಿರ್ಮಿಸಿರುವ ಅಂಗಡಿ ಮಳಿಗೆಯನ್ನು ಕೆಲ ಪಟ್ಟಭದ್ರರು ಕಾನೂನು ಬಾಹಿರವಾಗಿ ಅಕ್ರಮ ಮಾರ್ಗದಿಂದ ಎರಡು ಅಂಗಡಿಗಳನ್ನು ಬಾಡಿಗೆ ಪಡೆದುಕೊಂಡು ಮತ್ತೆ ಅದೇ ಮಳಿಗೆಗಳನ್ನು ಅತಿ ಹೆಚ್ಚು ಹಣಕ್ಕೆ ಉಪಬಾಡಿಗೆ ನೀಡಿದ್ದಾರೆ. ಇದರಲ್ಲಿ ವ್ಯಕ್ತಿಯೊಬ್ಬ ಅಂಗಡಿ ಮಳಿಗೆ ನನ್ನ ಸ್ವಂತದ್ದಾಗಿದೆ ಎಂದೇಳಿ ಮಾಸಿಕ 8 ಸಾವಿರ ರೂ.ಗೆ ಉಪ ಬಾಡಿಗೆ ನೀಡಿದ್ದನು. ಮಾತ್ರವಲ್ಲದೆ ಮುಂಗಡ ಹಣವಾಗಿ 50 ಸಾವಿರ ರೂ ನೀಡಲಾಗಿತ್ತು. ಪ್ರತಿ ತಿಂಗಳ ಬಾಡಿಗೆ ಹಣವನ್ನು ಫೋನ್ ಪೇ ಮೂಲಕ ಪಾವತಿ ಮಾಡುತ್ತಾ ಬಂದಿದ್ದೆವೆ ಎಂದು ಮಾಹಿತಿ ನೀಡಿದರು.
ಹಲವು ತಿಂಗಳ ನಂತರ ನನಗೆ ಬಾಡಿಗೆ ಸಾಕಾಗಲ್ಲ. 12 ಸಾವಿರ ರೂ ಬಾಡಿಗೆ ಕೊಡುವವರು ಇದ್ದಾರೆ ಮಳಿಗೆ ಖಾಲಿ ಮಾಡು ಎಂದು ಒತ್ತಡ ಹಾಕಿದಾಗ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದೆ. ವಿಚಾರಣೆ ಮಾಡಿದ ಅವರು ಪರವಾನಗಿ ರದ್ದುಪಡಿಸಿ ಎಂದು ತಾಪಂ ಪತ್ರ ರವಾನಿಸಿದ್ದರು. ಅದರಂತೆ ಅಧಿಕಾರಿಗಳು ಪರಿಶೀಲನೆ ನಡೆಸಿ ನೋಟಿಸ್ ಜಾರಿ ಮಾಡಿದ್ದರು. ಈ ನಡುವೆ ಆತ ಮದ್ದೂರು ಪೊಲೀಸ್ ಠಾಣೆಯಲ್ಲಿ ನನ್ನ ವಿರುದ್ಧ ವಿನಾಕಾರಣ ದೂರು ದಾಖಲು ಮಾಡಿದ್ದು, ಪೊಲಿಸರು ನನ್ನನ್ನು ಠಾಣೆಗೆ ಕರೆಯಿಸಿ ಮಳಿಗೆ ಖಾಲಿ ಮಾಡಲು ಸೂಚಿಸಿದ್ದು, ಭಯ ಬೀತನಾಗಿ ಕಾಲಾವಕಾಶ ಕೊರಿದಾಗ ಆ.10ರೊಳಗೆ ಖಾಲಿ ಮಾಡುವಂತೆ ಎಚ್ಚರಿಸಿದ್ದರು. ಇದರಿಂದ ಮನನೊಂದು ಶಾಸಕ ಕದಲೂರು ಉದಯ್ ಅವರನ್ನು ಭೇಟಿಯಾಗಿ ಪರಿಸ್ಥಿತಿ ವಿವರಿಸಿದಾಗ ನನಗೆ ಪರವಾನಗಿ ನೀಡುವಂತೆ ಸೂಚಿಸಿದ್ದರು. ಈ ನಡುವೆ ಗೂಂಡಾಗಳ ಜತೆಗೂಡಿ ಅಂಗಡಿ ಬೀಗ ಹೊಡೆದು ಅಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳನ್ನು ಬೇಕಾಬಿಟ್ಟಿ ಲಗೇಜ್ ಆಟೋಗೆ ತುಂಬಿಸಿ ಮಳೆಯಲ್ಲಿ ನೆನೆಸಿದ್ದಾರೆ. ಆದ್ದರಿಂದ ಮಳಿಗೆಯಲ್ಲಿ ವ್ಯಾಪಾರ ಮುಂದುವರಿಸಲು ಅವಕಾಶ ಮಾಡಿಕೊಟ್ಟು ಜೀವನೋಪಾಯ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.