ಬೆಳಗಾವಿಯ ಆರ್‌ಪಿಡಿ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಅಮೂಲ್ಯಾ ಲಿಯೋನ್‌ಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಪ್ರತಿಭಟಿಸಿದರು. ಶಿವಾನಂದ ಕಾಂಬಳೆ, ಕಿರಣ ದುಕಾಂದಾರ್, ಸವಿತಾ ಕುಂಬಾರ, ಕೋಯಿನಾ ಕಮತಿ, ಅನುದೀಪ ಕುಲಕರ್ಣಿ, ಸಾಗರ ಕಬ್ಬೂರ ಇದ್ದರು. 
ಜಿಲ್ಲೆ

ಅಮೂಲ್ಯಾ ಗಡಿಪಾರಿಗೆ ಎಬಿವಿಪಿ ಆಗ್ರಹ

ಬೆಳಗಾವಿ: ದೇಶ ವಿರೋಧಿ ಹೇಳಿಕೆ ನೀಡಿರುವ ಅಮೂಲ್ಯಾ ಲಿಯೋನ್‌ಳಿಗೆ ಕಠಿಣ ಶಿಕ್ಷೆ ನೀಡಿ, ಗಡಿಪಾರು ಮಾಡಬೇಕು. ಚಿಕ್ಕ ವಯಸ್ಸಿನಲ್ಲಿಯೇ ಆಕೆಯ ಮನಸ್ಸಲ್ಲಿ ರಾಷ್ಟ್ರದ್ರೋಹದ ಬೀಜ ಬಿತ್ತಿದ ಎಡಪಂಥೀಯ ಸಂಘಟನೆಗಳ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಎಬಿವಿಪಿ ಕಾರ್ಯಕರ್ತರು ಒತ್ತಾಯಿಸಿದ್ದಾರೆ.

ಶುಕ್ರವಾರ ನಗರದ ಆರ್‌ಪಿಡಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ಅಮೂಲ್ಯಾ ಲಿಯೋನ್‌ಳ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಶೋಷಣೆ, ದೌರ್ಜನ್ಯ ಮುಂತಾದ ಘೋಷಣೆಗಳೊಂದಿಗೆ ಯುವ ಜನಾಂಗವನ್ನು ಆಕರ್ಷಿಸಿ ಅವರಲ್ಲಿ ದೇಶದ ಬಗ್ಗೆ ನಕಾರಾತ್ಮಕ ಅಂಶಗಳನ್ನೇ ತುಂಬಿ ರಾಷ್ಟ್ರದ್ರೋಹದ ಕೆಲಸ ಮಾಡಲು ಪ್ರೇರೇಪಿಸಿ, ಮೋಜು ನೋಡುವುದೇ ಎಡಪಂಥೀಯರ ವಿಚಾರ ಎಂದು ಆರೋಪಿಸಿದರು.

ಮುಗ್ಧ ಯುವಕ- ಯುವತಿಯರ ತಲೆ ಕೆಡಿಸಿ ದೇಶದ್ರೋಹಿ ಕೆಲಸ ಮಾಡಲು ಕೆಲವು ಸಂಘಟನೆಗಳು ಪ್ರೇರೇಪಿಸುತ್ತಿವೆ ಎನ್ನುವುದಕ್ಕೆ ಇದೊಂದು ನಿದರ್ಶನ. ದೇಶದ್ರೋಹಿ ಹೇಳಿಕೆಗೆ ಅವಕಾಶ ನೀಡಿದ ಕಾರ್ಯಕ್ರಮ ಆಯೋಜಕರ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ಜಿಲ್ಲಾ ಸಂಚಾಲಕ ಶಿವಾನಂದ ಕಾಂಬಳೆ, ನಗರ ಕಾರ್ಯದರ್ಶಿ ಕಿರಣ ದುಕಾಂದಾರ್, ರಾಜ್ಯ ಸಹಕಾರ್ಯದರ್ಶಿ ಸವಿತಾ ಕುಂಬಾರ, ಕೋಯಿನಾ ಕಮತಿ, ಅನುದೀಪ ಕುಲಕರ್ಣಿ, ಸಾಗರ ಕಬ್ಬೂರ, ಅಶ್ವಿನಿ ಕಂಚಿ, ಸುಜೇಯ ಪತ್ತಾರ ಇತರರಿದ್ದರು.