ಜಿಲ್ಲೆ

ಗ್ರಾಪಂಗೆ ಬೀಗ ಜಡಿದು ಪ್ರತಿಭಟನೆ

Davangere - Desk - Ganesh M K

ಚನ್ನಗಿರಿ: ತಾಲೂಕಿನ ತಾವರೆಕೆರೆ ಗ್ರಾಪಂ ಗ್ರಾಮೀಣಾಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಕಳೆದ ಎರಡು ತಿಂಗಳಿಂದ ಕಚೇರಿಗೆ ಬರುತ್ತಿಲ್ಲ. ಆದ್ದರಿಂದ ಹೊಸ ಅಧಿಕಾರಿ ನೇಮಿಸುವಂತೆ ಒತ್ತಾಯಿಸಿ ಗ್ರಾಪಂ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶುಕ್ರವಾರ ಗ್ರಾಪಂ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲಲಿತಮ್ಮ ಮಾತನಾಡಿ, ಕಚೇರಿಯಲ್ಲಿದ್ದ ಗ್ರಾಮಾಭಿವೃದ್ಧಿ ಅಧಿಕಾರಿಯನ್ನು ತಾಲೂಕಿನ ಮಲಹಾಳ್ ಗ್ರಾಮದ ಗ್ರಾಪಂಗೆ ತಾತ್ಕಾಲಿಕ ವರ್ಗಾವಣೆ ಮಾಡಲಾಗಿದೆ. ಹಾಗಾಗಿ, ಅವರು ಇಲ್ಲಿಗೆ ಬರುವುದನ್ನು ನಿಲ್ಲಿಸಿದ್ದಾರೆ. ಇದರಿಂದ ಕಚೇರಿ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿವೆ. ಆದ್ದರಿಂದ ಪ್ರತ್ಯೇಕ ಅಧಿಕಾರಿಯನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಈ ಕುರಿತು ತಾಪಂ ಕಾರ್ಯನಿರ್ವಾಹಣಾಧಿಕಾರಿಗೆ ಮನವಿ ನೀಡಿ ತಿಂಗಳು ಕಳೆದರೂ ಯಾವುದೇ ಕ್ರಮವಾಗಿಲ್ಲ. ಗ್ರಾಪಂ ವಿವಿಧ ಕಾರ್ಯಗಳಿಗೆ ಬರುವ ಸಾರ್ವಜನಿಕರು ಅಧಿಕಾರಿಗಳು ಇಲ್ಲದ್ದನ್ನು ಕಂಡು ಅಸಮಾಧಾನದಿಂದ ತೆರಳುತ್ತಿದ್ದಾರೆ. ಈ ಕುರಿತು ನಮ್ಮ ಬಳಿ ಪ್ರಶ್ನಿಸುತ್ತಾರೆ ಎಂದರು.

ಜತೆಗೆ, ಪಿಡಿಒ ಇಲ್ಲದ ಸಮಯದಲ್ಲಿ ಕಾರ್ಯದರ್ಶಿ ಕಚೇರಿಯಲ್ಲಿ ಇರಬೇಕು. ಆದರೆ, ಕಾರ್ಯದರ್ಶಿ ಅಧಿಕಾರಿ ಇಲ್ಲವೆಂಬ ನೆಪವೊಡ್ಡಿ ಅವರೂ ಸಹ ಬರುತ್ತಿಲ್ಲ. ಆದ್ದರಿಂದ ಈ ಕೂಡಲೇ ನೂತನ ಗ್ರಾಮೀಣಾಭಿವೃದ್ಧಿ ಅಧಿಕಾರಿ ಹಾಗೂ ಕಾರ್ಯದರ್ಶಿ ಇಬ್ಬರನ್ನೂ ನೇಮಕ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪಂಚಾಯಿತಿ ಉಪಾಧ್ಯಕ್ಷೆ ಸುಮಾ, ಸದಸ್ಯರಾದ ಟಿ.ಪಿ. ಅಣ್ಣಾಮಲೈ, ಸಾವಿತ್ರಮ್ಮ, ಪ್ರಸನ್ನ, ಸಂದೀಪ್, ಚಂದ್ರಶೇಖರ್, ಮಂಜಪ್ಪ, ಮಂಜುಳಾ, ಫರ್ಜಾನ್ ಖಾನ್, ಸಾಜಿಯ ಇದ್ದರು.