ಸುಳ್ಯ: ಮೆಸ್ಕಾಂ ಇಂಜಿನಿಯರ್, ಪೊಲೀಸ್, ಲೋಕೋಪಯೋಗಿ, ಸಾಮಾಜಿಕ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಗೈರು ಹಿನ್ನೆಲೆಯಲ್ಲಿ ಜಾಲ್ಸೂರು ಗ್ರಾಪಂ ದ್ವಿತೀಯ ಹಂತದ ಗ್ರಾಮಸಭೆ ರದ್ದುಗೊಳಿಸಲಾಯಿತು.
ಇಲಾಖಾ ಅಧಿಕಾರಿಗಳು ಗೈರುಹಾಜರಿ ಬಗ್ಗೆ ಊರವರು ಅಸಮಾಧಾನ ವ್ಯಕ್ತಪಡಿಸಿದರು. ಗ್ರಾಪಂ ಪ್ರಭಾರ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ನಾಯ್ಕ ಅವರು ಎಲ್ಲಾ ಇಲಾಖೆ ಅಧಿಕಾರಿಗಳಿಗೆ ಗ್ರಾಮಸಭೆ ಕುರಿತು ನೋಟಿಸ್ ಮಾಡಲಾಗಿದೆ ಎಂದರು.
ಮುಖ್ಯವಾಗಿ ಬರಬೇಕಾಗಿದ್ದ ಮೆಸ್ಕಾಂ ಸುಳ್ಯ, ಲೋಕೋಪಯೋಗಿ, ಜಿಪಂ ಇಂಜಿನಿಯರಿಂಗ್, ಪೊಲೀಸ್, ಸಾಮಾಜಿಕ ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರದ ಕಾರಣ ಗ್ರಾಮಸಭೆ ಮುಂದೂಡುವಂತೆ ಗ್ರಾಮಸ್ಥರು ಪಟ್ಟು ಹಿಡಿದರು.
ಗ್ರಾಪಂ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಮತ್ತು ನೋಡೆಲ್ ಅಧಿಕಾರಿಗಳು ಚರ್ಚೆ ನಡೆಸಿ, ಗ್ರಾಮಸಭೆಗೆ ಅಗತ್ಯವಾಗಿ ಬರಬೇಕಾಗಿದ್ದ ಇಲಾಖೆ ಅಧಿಕಾರಿಗಳು ಗೈರಾಗಿರುವ ಕಾರಣ ಗ್ರಾಮಸಭೆ ಮುಂದೂಡುವುದಾಗಿ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಅಡ್ಕಾರುಬೈಲು ಘೋಷಿಸಿದರು.