ತುಮಕೂರು: ಕರೊನಾ ಸಂಕಷ್ಟದಲ್ಲೇ ಕಾರ್ಮಿಕ ಕಾನೂನು ಬದಲಾವಣೆ, ಎಪಿಎಂಸಿ ಕಾಯ್ದೆ, ವಿದ್ಯುತ್ ಕಾಯ್ದೆ, ಅಗತ್ಯವಸ್ತುಗಳ ಕಾಯ್ದೆ, ಭೂ ಕಂದಾಯ ಕಾಯ್ದೆಗಳ ತಿದ್ದುಪಡಿಗೊಳಿಸುತ್ತಿರುವ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕ್ರಮ ಖಂಡಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಜಂಟಿಯಾಗಿ ಪ್ರತಿಭಟನೆ ನಡೆಸಿದವು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ, ಎಐಕೆಎಸ್‌ಸಿಸಿ, ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಜಿಲ್ಲಾ ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಪ್ರತಿಭಟಿಸಿ, ಆದಾಯ ತೆರಿಗೆ ಮಿತಿ ಹೊರಗಿರುವ ಎಲ್ಲ ಕುಟುಂಬಳಿಗೆ ಮುಂದಿನ 6 ತಿಂಗಳು 7,500 ರೂ., ಉಚಿತ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡಬೇಕು. ಎಲ್ಲ ಕೃಷಿ ಸಾಲವನ್ನು ಮನ್ನಾ ಮಾಡಬೇಕು ಮತ್ತು ಹೊಸದಾಗಿ ಸಾಲ ನೀಡಬೇಕೆಂದು ಆಗ್ರಹಿಸಿದರು.
ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ಎಐಕೆಎಸ್‌ಸಿಸಿ ಜಿಲ್ಲಾ ಸಂಚಾಲಕ ಸಿ.ಯತಿರಾಜು, ನೂತನ ಶಿಕ್ಷಣ ನೀತಿ ಜಾರಿ ಕೈಬಿಟ್ಟು, ಆನ್‌ಲೈನ್ ಶಿಕ್ಷಣ ಹಾಗೂ ಪರೀಕ್ಷೆಗಳನ್ನು ಈ ಅವಧಿಯಲ್ಲಿ ನಿಷೇಧಿಸಬೇಕು, ಎಲ್ಲ ಕೃಷಿ ಸಾಲ ಮನ್ನಾ ಮಾಡಬೇಕು ಹಾಗೂ ಹೊಸದಾಗಿ ಸಾಲ ನೀಡಬೇಕು. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೆಲಸದ ದಿನಗಳನ್ನು 200 ದಿನಗಳಿಗೆ ಹೆಚ್ಚಿಸಬೇಕು. ನಗರ ಪ್ರದೇಶಗಳಿಗೆ ಯೋಜನೆ ವಿಸ್ತರಿಸಬೇಕು ಎಂದು ಒತ್ತಾಯಿಸಿದರು. ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರೀಶ್ ಮಾತನಾಡಿ, ಕಾರ್ಮಿಕರ ಸಮಸ್ಯೆಗಳನ್ನು ಆಲಿಸದೆ, ಲೇ-ಆಫ್, ರಿಟ್ರೆಂಚ್ಮೆಂಟ್, ಮುಚ್ಚುವಿಕೆಗಳಿಗೆ ಶೀಘ್ರ ಅನುಮತಿಯ ಪ್ರೋತ್ಸಾಹ ಇತ್ಯಾದಿಗಳ ಮೂಲಕ ಕಾರ್ಮಿಕ ಇಲಾಖೆ ಕಾನೂನು ಜಾರಿಯಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿರುವುದನ್ನು ಸರಿಯಲ್ಲ ಎಂದರು.
ಪ್ರತಿಭಟನೆಯಲ್ಲಿ ಎಐಟಿಯುಟಿಯುಸಿ ಸಂಚಾಲಕಿ ಮಂಜುಳ, ದಲಿತ ಸಂಘರ್ಷ ಸಮಿತಿ ಜಿಲ್ಲಾಧ್ಯಕ್ಷ ಪಿ.ಎನ್.ರಾಮಯ್ಯ, ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಜಿಲ್ಲಾಧ್ಯಕ್ಷ ಎ.ನರಸಿಂಹಮೂರ್ತಿ, ಪ್ರಾಂತ ರೈತ ಸಂಘದ ಸಿ.ಅಜ್ಜಪ್ಪ, ಬಿ.ಉಮೇಶ್, ಕೆ.ದೊರೈರಾಜ್, ತಾಜುದ್ದೀನ್, ಸಿಐಟಿಯು ತಾಲೂಕು ಕಾರ್ಯದರ್ಶಿ ರಂಗಧಾಮಯ್ಯ, ಎಐಟಿಯುಸಿ ಮುಖಂಡ ಕಂಬೇಗೌಡ, ಪದ್ಮನಾಭ್, ನಾಗಣ್ಣ ಅಂಗನವಾಡಿ ನೌಕರರ ಸಂಘದ ಗೌರಮ್ಮ, ಜಬೀನ, ಗಂಗಾ ಭಾಗವಹಿಸಿದ್ದರು.
ನಿರುದ್ಯೋಗ ಸಮಸ್ಯೆ ಪರಿಹರಿಸಿ: ಜನಸಾಮಾನ್ಯರು ತೀವ್ರ ಸಂಕಷ್ಟದಲ್ಲಿರುವ ಸಂದರ್ಭದಲ್ಲಿ ಸರ್ಕಾರ ಜನರ ನೆರವಿಗೆ ಧಾವಿಸದೆ ಜನತೆಯ ಆಸ್ತಿಯಾದ ರೈಲ್ವೆ, ರಕ್ಷಣಾ ವಲಯದ ಕಾರ್ಖಾನೆಗಳು, ಜೀವ ವಿಮಾ ನಿಗಮ, ಬ್ಯಾಂಕ್‌ಗಳು, ಬಂದರು, ವಿಮಾನ ನಿಲ್ದಾಣಗಳು ಮತ್ತು ಮತ್ತಿತರ ಸಾರ್ವಜನಿಕ ವಲಯದ ಕಂಪನಿಗಳನ್ನು ಖಾಸಗೀಕರಣಗೊಳಿಸುತ್ತಿದೆ. ನಿರುದ್ಯೋಗಕ್ಕೆ ಪರಿಹಾರ ಕಾಣಲು ಉದ್ಯೋಗ ಸೃಷ್ಟಿಯ ದಿನಗಳನ್ನು ಸೃಷ್ಟಿಸಬೇಕು ಎಂದು ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಆಗ್ರಹಿಸಿದರು.