ಜಿಲ್ಲೆ

ಸರ್ಕಾರಿ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ರದ್ದುಪಡಿಸಿ

ಹಾಸನ: ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಎನ್‌ಆರ್‌ಐ ಕೋಟಾ ರದ್ದುಪಡಿಸಲು ಕೋರಿ ಎಐಡಿಎಸ್‌ಒ ನೇತೃತ್ವದಲ್ಲಿ ಬುಧವಾರ ಹೇಮಾವತಿ ಪ್ರತಿಮೆ ಮುಂಭಾಗ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಎಐಡಿಎಸ್‌ಒ ಜಿಲ್ಲಾ ಸಂಚಾಲಕಿ ಚೈತ್ರಾ, ರಾಜ್ಯ ಸರ್ಕಾರವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸೀಟಿಗೆ 25 ಲಕ್ಷ ರೂ. ದುಬಾರಿ ಶುಲ್ಕದೊಂದಿಗೆ ಶೇ.15 ರಷ್ಟು ಎನ್‌ಆರ್‌ಐ ಕೋಟಾ ಆರಂಭಿಸಲು ನಿರ್ಧರಿಸಿದೆ. ಈ ಕ್ರಮದಿಂದ ವೈದ್ಯಕೀಯ ಕಾಲೇಜುಗಳಿಗೆ ಹಣ ಹರಿದುಬರಲಿದೆ ಎಂದು ಸರ್ಕಾರ ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಈ ವಿಧಾನವು ಬಡ-ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾದ ಸರ್ಕಾರಿ ಸೀಟುಗಳನ್ನು ಶ್ರೀಮಂತರಿಗೆ ಹರಾಜು ಹಾಕುವ ಮತ್ತು ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣದತ್ತ ತಳ್ಳುವ ಪ್ರಯತ್ನವಾಗಿದೆ ಎಂದು ದೂರಿದರು.

ವೈದ್ಯರಾಗಿ ಸಮಾಜಕ್ಕೆ ಸೇವೆ ಸಲ್ಲಿಸಲು ಬಯಸುವ ನೂರಾರು ಶ್ರಮಜೀವಿ, ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ

ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶದ ಬಾಗಿಲು ಮುಚ್ಚುತ್ತಿದೆ. ಈಗಾಗಲೇ ಕರ್ನಾಟಕದ ಸರ್ಕಾರಿ, ವೈದ್ಯಕೀಯ ಕಾಲೇಜುಗಳ ಶುಲ್ಕ ದೇಶದಲ್ಲಿಯೇ ಅತಿ ಹೆಚ್ಚಿದ್ದು, ಈ ಅನ್ಯಾಯದ ಹೊರೆಯನ್ನು ಕಡಿಮೆ ಮಾಡುವ ಬದಲು, ಸರ್ಕಾರವು ವಿದ್ಯಾರ್ಥಿಗಳಿಂದ ಇನ್ನಷ್ಟು ಹಣವನ್ನು ವಸೂಲಿ ಮಾಡಲು ನಿರ್ಲಜ್ಜವಾಗಿ ಪ್ರಯತ್ನಿಸುತ್ತಿದೆ. ವೈದ್ಯಕೀಯ ಕಾಲೇಜುಗಳನ್ನು ಬಲಪಡಿಸಲು ರಾಜ್ಯದ ಬೊಕ್ಕಸದಿಂದ ಅವಶ್ಯಕ ಹಣವನ್ನು ಮಂಜೂರು ಮಾಡುವ ಬದಲು, ಸರ್ಕಾರವು ನಾಚಿಕೆಯಿಲ್ಲದೆ ಈ ಹೊರೆಯನ್ನು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲೆ ವರ್ಗಾಯಿಸುತ್ತಿದೆ ಎಂದು ಕಿಡಿಕಾರಿದರು.

ಕರ್ನಾಟಕ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ 12,447 ಖಾಲಿ ಇರುವ ಬೋಧಕ ಹುದ್ದೆಗಳನ್ನು ಭರ್ತಿ ಮಾಡಿ ಮತ್ತು ಮೂಲ ಸೌಕರ್ಯವನ್ನು ಖಾತ್ರಿಪಡಿಸಲು ಆದ್ಯತೆ ನೀಡಬೇಕಿರುವುದು ಅತ್ಯಗತ್ಯವಾಗಿದೆ. ಈ ಕೂಡಲೇ ರಾಜ್ಯ ಸರ್ಕಾರದ ವಿದ್ಯಾರ್ಥಿ ವಿರೋಧಿ ಮತ್ತು ಜನವಿರೋಧಿ ಕ್ರಮ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಕರ್ತರಾದ ಸುಷ್ಮಾ, ತಿಲಕ್ ಇತರರು ಇದ್ದರು.