ಜಿಲ್ಲೆ

ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕ

Udupi

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಾರ್ಷಿಕ ಮಹಾಭಿಷೇಕದ ಪ್ರಯುಕ್ತ ಶ್ರೀ ಕೃಷ್ಣ ದೇವರಿಗೆ 1108 ಸೀಯಾಳ ಅಭಿಷೇಕ ಹಾಗೂ ಪಂಚಾಮೃತ ಅಭಿಷೇಕ ಮಂಗಳವಾರ ನೆರವೇರಿತು.

ಪರ್ಯಾಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ, ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಸ್ವಾಮೀಜಿ, ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ, ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಪಲಿಮಾರು ಕಿರಿಯ ಶ್ರೀ ವಿದ್ಯಾರಾಜೇಶ್ವರ ತೀರ್ಥ ಸ್ವಾಮೀಜಿ ಉಪಸ್ಥಿತದ್ದರು.

ನಾಳೆಯಿಂದ ಚಾತುರ್ಮಾಸ್ಯ: ಕೃಷ್ಣ ಮಠದಲ್ಲಿ ಜುಲೈ 2ರಂದು ಚಾತುರ್ಮಾಸ್ಯ ವ್ರತ ಆರಂಭವಾಗಲಿದ್ದು, ನ.27ರವರೆಗೆ ಶಾಖಾ ವ್ರತ, ದಧಿ ವ್ರತ, ಕ್ಷೀರ ವ್ರತ, ದ್ವಿದಳ ವ್ರತ ಕಾಲದಲ್ಲಿ ಅನ್ನಪ್ರಸಾದದಲ್ಲಿ ಭಿನ್ನ ಹಾಗೂ ವಿಶಿಷ್ಟ ಆಹಾರ ಪದ್ಧತಿ ಅನುಸರಿಸಲಾಗುತ್ತದೆ.

ಶಯನೀ ದ್ವಾದಶಿಯಂದು ಪ್ರಾರಂಭವಾಗುವ ಶಾಖಾ ವ್ರತದಲ್ಲಿ ಅಡುಗೆಯಲ್ಲಿ ತರಕಾರಿ ಬಳಸುವಂತಿಲ್ಲ. ಹೀಗಾಗಿ ಹೆಸರು ಬೇಳೆ, ಉದ್ದಿನ ಬೇಳೆ, ಜೀರಿಗೆ, ಮಾವಿನ ಕಾಯಿ, ತೆಂಗಿನ ಕಾಯಿ, ಪೊಣ್ಣಂಗಣಿ ಸೊಪ್ಪು, ಬ್ರಾಹ್ಮಿ, ಕರಿಮೆಣಸುಗಳನ್ನು ಉಪಯೋಗಿಸಿ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ಜುಲೈ 31ರಿಂದ ದಧಿ ವ್ರತ ಆರಂಭವಾಗಲಿದ್ದು, ಮೊಸರು ಬಳಸುವಂತಿಲ್ಲ.

ಆಗಸ್ಟ್ 30ಕ್ಕೆ ಕ್ಷೀರ ವ್ರತ ಆರಂಭವಾಗಲಿದ್ದು, ಈ ಅವಧಿಯಲ್ಲಿ ಹಾಲು ಸೇವನೆ ನಿಷಿದ್ಧವಾಗಿದೆ. ಅಕ್ಟೋಬರ್ 28ರಂದು ದ್ವಿದಳ ವ್ರತಾರಂಭವಾಗಲಿದ್ದು, ಬೇಳೆ, ತರಕಾರಿಯೂ ನಿಷಿದ್ಧ. ಈ ಅವಧಿಯಲ್ಲಿ ಗೆಣಸು, ಸುವರ್ಣಗಡ್ಡೆ, ಅರಿಶಿನ, ಜೀರಿಗೆ, ತೆಂಗಿನಕಾಯಿ, ಕರಿಮೆಣಸು, ಅವಲಕ್ಕಿ, ಹರಳು ಮೊದಲಾದವುಗಳನ್ನು ಬಳಸಿದ ಪದಾರ್ಥಗಳನ್ನು ಸೇವಿಸಲಾಗುತ್ತದೆ. ಈ ಬಾರಿ ಅಧಿಕ ಮಾಸ ಬಂದಿರುವ ಕಾರಣ ಕ್ಷೀರವ್ರತ 2 ತಿಂಗಳು ಇರಲಿದ್ದು, ಉತ್ಥಾನ ದ್ವಾದಶಿ ದಿನ ಚಾತುರ್ಮಾಸ್ಯ ವ್ರತ ಸಮಾಪನಗೊಳ್ಳಲಿದೆ.

ಇಂದು ಮುದ್ರಾಧಾರಣೆ: ಪ್ರಥಮನ ಏಕಾದಶಿ ಅಂಗವಾಗಿ ಬುಧವಾರ ಕೃಷ್ಣ ಮಠದಲ್ಲಿ ಮುದ್ರಾಧಾರಣೆ ನಡೆಯಲಿದೆ. ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಯತಿಗಳಿಗೆ ಮಾತ್ರ ಮುದ್ರಾಧಾರಣೆ ಮಾಡಲಾಗುತ್ತದೆ.