ಇಂಡಿ: ದಿ.ಡಿ.ದೇವರಾಜ್ ಅರಸು ಅವರು ಹಿಂದುಳಿದ ವರ್ಗಗಳ ಧೀಮಂತ ನಾಯಕ ಮತ್ತು ಸಾಮಾಜಿಕ ಪರಿವರ್ತನೆಯ ಹರಿಕಾರರಾಗಿದ್ದರು. ಅವರು ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದಿರುವ ಭೂ ವಿಕೇಂದ್ರೀಕರಣ ಕಾಯ್ದೆ ದೇಶದಲ್ಲೇ ಮಾದರಿಯಾಗಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಭಾನುವಾರ ತಾಲೂಕು ಆಡಳಿತ ಏರ್ಪಡಿಸಿದ್ದ ದಿ.ಡಿ.ದೇವರಾಜ ಅರಸು ಅವರ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ದೇವರಾಜ ಅರಸು ಅವರು 10 ವರ್ಷ ರಾಜ್ಯದ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ಬಡವರು, ದೀನದಲಿತರು, ಭೂ ಕಾರ್ಮಿಕರನ್ನು ಮೇಲೆತ್ತುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಎಲ್ಲರಿಗೂ ಶಿಕ್ಷಣ ನೀಡುವ ಮತ್ತು ಉದ್ಯೋಗವಕಾಶ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಮೀಸಲಾತಿ ಜಾರಿಗೆ ತಂದು ಜನಪ್ರಿಯರಾದರು. ಅವರ ಜೀವನದ ಆದರ್ಶಗಳು ಹಾಗೂ ಸಿದ್ಧಾಂತಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವುದಕ್ಕಾಗಿ ತಾಲೂಕು ಆಡಳಿತ ಪ್ರತಿವರ್ಷ ಅವರ ಜಯಂತ್ಯುತ್ಸವ ಆಚರಿಸುತ್ತಿದೆ ಎಂದರು.
ತಹಸೀಲ್ದಾರ್ ಬಿ.ಎಸ್.ಕಡಕಭಾವಿ ಮಾತನಾಡಿದರು. ನಾದ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಿ.ಎಂ.ಬಂಡಗಾರ ವಿಶೇಷ ಉಪನ್ಯಾಸ ನೀಡಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ದಿ.ಡಿ.ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿ ಜೀತ ಪದ್ಧತಿ ನಿರ್ಮೂಲನೆ, ಭೂ ಸುಧಾರಣೆ, ಉಳುವವನೇ ಭೂ ಒಡೆಯ, ಹಾವನೂರ ವರದಿ ಜಾರಿ, ಅರಣ್ಯ ರಕ್ಷಣೆ, ಋಣ ಪರಿಹಾರ ಪದ್ಧತಿ, ಅಸ್ಪ್ಪಶ್ಯತಾ ನಿವಾರಣೆ, ಮಲಹೊರುವ ಪದ್ಧತಿ ನಿರ್ಮೂಲನೆ ಸೇರಿ ಹಲವಾರು ಸಮಾಜ ಸುಧಾರಣೆ ಕಾರ್ಯಗಳನ್ನು ಮಾಡಿ ಕರ್ನಾಟಕದ ಜನ ಮನದಲ್ಲಿ ಉಳಿದುಕೊಂಡವರು. ಅವರ ಆದರ್ಶಗಳನ್ನು ನಮ್ಮ ಪೀಳಿಗೆಗೆ ತಿಳಿಸಿಕೊಡುವುದು ಅಗತ್ಯವಾಗಿದೆ ಎಂದರು.
ತಾಲೂಕಿನ ವಿವಿಧ ವಸತಿ ನಿಲಯದ ಪರೀಕ್ಷೆ, ಕ್ರೀಡೆ, ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು. ತಾಪಂ ಇಒ ಸುನೀಲ ಮದ್ದೀನ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್.ಎಸ್.ದುದ್ದಗಿ, ಸಮಾಜ ಕಲ್ಯಾಣಾಧಿಕಾರಿ ಬಿ.ಜೆ.ಇಂಡಿ ಇತರರಿದ್ದರು. ಬಸವರಾಜ ಗೊರನಾಳ ನಿರೂಪಿಸಿ ವಂದಿಸಿದರು.