ಜಿಲ್ಲೆ

ಅಭಿವೃದ್ಧಿ ಮಾಡಿಯೇ ಮತ ಕೇಳ್ತೀವಿ, ಸಂಸದ ಸುರೇಶ್ ಅಭಿಮತ ಪೋಡು ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ

ಆನೇಕಲ್: ಸಿಎಎ, ಎನ್‌ಆರ್‌ಸಿ ಹಾಗೂ ಪುಲ್ವಾಮಾ ದಾಳಿ ಹೆಸರಿನಲ್ಲಿ ಮತ ಕೇಳುವ ಸಿದ್ಧಾಂತ ನಮ್ಮದಲ್ಲ. ನಾವು ಅಭಿವೃದ್ಧಿ ಮಾಡಿದ ಬಳಿಕ ಮತ ಕೇಳುವವರು ಎಂದು ಸಂಸದ ಡಿ.ಕೆ. ಸುರೇಶ್ ಅಭಿಪ್ರಾಯಪಟ್ಟರು.

ಹುಲಿಮಂಗಲ ಗ್ರಾಮ ಪಂಚಾಯಿತಿಯ ಪೋಡು ಗ್ರಾಮದಲ್ಲಿ ಶನಿವಾರ ಕಾವೇರಿ ಕುಡಿಯುವ ನೀರು ಪೂರೈಕೆಗೆ ಚಾಲನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

7.5 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ನಮ್ಮ ಆದ್ಯತೆ ಅಭಿವೃದ್ಧಿ ಪರ. ಕಾವೇರಿ ನೀರು ಈ ಭಾಗಕ್ಕೆ ಬಂದಿದೆ ಎಂದರೆ ನಿಜವಾದ ಯುಗಾದಿ ಹಬ್ಬ ಎಂದರು.

ಶಾಸಕ ಕೃಷ್ಣಪ್ಪ ಅವರ ಕೃಪಾಕಟಾಕ್ಷದಿಂದ ಬೆಂಗಳೂರಿನ ಕಸವನ್ನು ಎಸ್. ಬಿಂಗೀಪುರದಲ್ಲಿ ವಿಲೇ ಮಾಡಲಾಗುತ್ತಿತ್ತು. ಜನ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ನಾನೇ ಪರಿಶೀಲನೆ ನಡೆಸಿ ಕಸ ಹಾಕುವುದನ್ನು ನಿಲ್ಲಿಸಿ, ಅಲ್ಲಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದೆ ಎಂದರು.

ಗ್ರಾಮ ಪಂಚಾಯತಿ ಚುನಾವಣೆ ಸಮೀಪಿಸುತ್ತಿದ್ದು, ಎಲ್ಲ ಪಕ್ಷದವರು ಹಣ ನೀಡುತ್ತಾರೆ. ಆದರೆ ಒಳ್ಳೆಯ ವ್ಯಕ್ತಿಗೆ ಮತ ನೀಡಿದರೆ ಮುಂದಿನ ದಿನಗಳಲ್ಲಿ ಗ್ರಾಮ ಅಭಿವೃದ್ಧಿ ಆಗಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಎಂ. ನಾರಾಯಣಸ್ವಾಮಿ ಮಾತನಾಡಿ, ಶಾಸಕ ಕೃಷ್ಣಪ್ಪ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಕೆಟ್ಟ ರಾಜಕಾರಣ ಮಾಡುವುದನ್ನು ಬಿಡಬೇಕು. ಅಧಿಕಾರಿಗಳಿಗೆ ಧಮಕಿ ಹಾಕಿ ಕಾರ್ಯಕ್ರಮ ಮಾಡಲು ಬಿಡದಿರುವುದು ಉತ್ತಮ ಬೆಳವಣಿಗೆಯಲ್ಲ ಎಂದರು.

ಕಾವೇರಿ ಕುಡಿಯುವ ನೀರನ್ನು ಪೋಡು ಗ್ರಾಮಕ್ಕೆ ತರಲು ಸಂಸದ ಡಿ.ಕೆ. ಸುರೇಶ್ ಸಾಕಷ್ಟು ಶ್ರಮಿಸಿದ್ದಾರೆ. ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಉದ್ಘಾಟನೆ ಮಾಡಲು ಮುಂದಾದರೆ ಬ್ಯಾನರ್‌ಗಳನ್ನು ಕಿತ್ತು ವಿರೋಧ ವ್ಯಕ್ತಪಡಿಸಿದ್ದಾರೆ. ಇಂತಹ ನೀಚ ರಾಜಕಾರಣ ಮಾಡಬಾರದು ಎಂದು ಗ್ರಾಪಂ ಸದಸ್ಯ ಪೋಡು ರವಿ ಆಕ್ರೋಶ ವ್ಯಕ್ತಪಡಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸಮ್ಮ ಮಂಜುನಾಥ್, ಮಹಿಳಾ ಕಾಂಗ್ರೆಸ್ ಉಪಾಧ್ಯಕ್ಷೆ ಹುಲಿಮಂಗಲ ಸುಷ್ಮಾ ರಾಜಗೋಪಾಲ ರೆಡ್ಡಿ, ಬಮುಲ್ ಮಾಜಿ ಅಧ್ಯಕ್ಷ ಆರ್.ಕೆ. ರಮೇಶ್, ಹಿಂದುಳಿದ ವರ್ಗಗಳ ತಾಲೂಕು ಅಧ್ಯಕ್ಷ ಅಚ್ಚುತ ರಾಜು, ದಕ್ಷಿಣ ತಾಲೂಕು ಕಾಂಗ್ರೆಸ್ ಅಧ್ಯಕ್ಷ ತಿಮ್ಮಾರೆಡ್ಡಿ, ಗ್ರಾಪಂ ಸದಸ್ಯ ಪೋಡು ಗ್ರಾಮದ ರವಿ ಇದ್ದರು.