ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಇಲ್ಲಿನ ಲೆಪ್ಪದ ಬಸದಿ, ಭಗವಾನ್ 1008 ಶ್ರೀ ಚಂದ್ರನಾಥ ಸ್ವಾಮಿ ಹಾಗೂ ಶ್ರೀ ಜ್ವಾಲಾಮಾಲಿನೀ ಅಮ್ಮನವರ ಬಸದಿಯ 38ನೇ ವಾರ್ಷಿಕ ಅಟ್ಟಳಿಗೆ ಅಭಿಷೇಕದ ಪ್ರಯುಕ್ತ ಭಾನುವಾರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.
ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಅವರ ಮಾರ್ಗದರ್ಶನ ಹಾಗೂ ಉಪಸ್ಥಿತಿಯಲ್ಲಿ ಭಾನುವಾರ ಜ್ವಾಲಾಮಾಲಿನೀ ದೇವಿ ಪ್ರತಿಷ್ಠಾಪನಾ ಮಹೋತ್ಸವ, ದೇವಿಯ ಮುಖವಸ್ತ್ರ ಉದ್ಘಾಟನೆ ನಡೆಯಿತು. ಬಳಿಕ ಕೆರೆಬಸದಿಗೆ ಅಗ್ರೋದಕ ಹೊರಟು, ರಾತ್ರಿ ಚಂದ್ರನಾಥ ಸ್ವಾಮಿಗೆ 108 ಕಲಶ ಮಹಾಭಿಷೇಕ ನಡೆಯಿತು.
ಉತ್ಸವದ ಪ್ರಯುಕ್ತ ಶನಿವಾರ ಮೂಡುಬಿದಿರೆ ತೌಳವ ಇಂದ್ರ ಸಮಾಜದ ಅಧ್ಯಕ್ಷ ಜ್ಞಾನಚಂದ್ರ ಇಂದ್ರ ದೀಪ ಪ್ರಜ್ವಲಿಸಿದರು. ಬಳಿಕ ನಿರೀಕ್ಷಾ ಜೈನ್ ಹೊಸ್ಮಾರು ಬಳಗದವರಿಂದ ಜಿನ ಭಕ್ತಿಗೀತೆ ಕಾರ್ಯಕ್ರಮ ನಡೆಯಿತು.
ಬಸದಿಗಳ ಮೊಕ್ತೇಸರರಾದ ಪಟ್ಣ ಶೆಟ್ಟಿ ಎಂ.ಸುದೇಶ್ ಕುಮಾರ್, ಆನಡ್ಕ ದಿನೇಶ್ ಕುಮಾರ್, ಆದರ್ಶ ಎಂ. ಕೊಂಡೆ ಮನೆತನ, ಚೌಟರ ಅರಮನೆಯ ಕುಟುಂಬಸ್ಥರು, ಶ್ರಾವಕರು ಭಾಗವಹಿಸಿದ್ದರು.