ಜಿಲ್ಲೆ

ಶಾಂತಿಯುತ ಚುನಾವಣೆ ನಡೆಸಿದ್ದಕ್ಕೆ ಅಭಿನಂದನೆ: ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ವಿಧಾನಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಯಲು ಸಹಕರಿಸಿದ ಮತದಾರರು, ಮಾಧ್ಯಮದವರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿ, ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ತಿಳಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಜರ್ನಲಿಸ್ಟ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ಚುನಾವಣೆ ನಡೆಸುವುದು ನಮಗೂ ಕೂಡ ಹೆಮ್ಮೆಯ ವಿಷಯವಾಗಿದೆ. ಎಲ್ಲಿಯೂ ಕೂಡ ಅಹಿತಕರ ಘಟನೆ ನಡೆಯದಂತೆ ಸುಸೂತ್ರವಾಗಿ ಚುನಾವಣೆ ಮುಗಿದಿದ್ದು ಸಂತಸ ತಂದಿದೆ ಎಂದು ತಿಳಿಸಿದರು.

ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಚುನಾವಣಾ ದಿನಾಂಕ ಘೋಷಣೆ ಮುನ್ನವೇ ಪೂರ್ವ ತಯಾರಿ ಮಾಡಿಕೊಂಡಿದ್ದು ಶಾಂತಿಯುತ ಚುನಾವಣೆಗೆ ಕಾರಣವಾಯಿತು. ಕಳೆದ ಬಾರಿ ಜಿಲ್ಲೆಯಲ್ಲಿ ಮತದಾನದ ಸಂಖ್ಯೆ ಕಡಿಮೆಯಾಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ವಿಶೇಷ ಕಾಳಜಿ ವಹಿಸಿ ಮತದಾರರಲ್ಲಿ ಜಾಗೃತಿ ಮೂಡಿಸುವ ಜತೆಗೆ ಮತದಾರರ ಪರಿಷ್ಕರಣೆ ಮಾಡಿದ ಫಲವಾಗಿ ಈ ಬಾರಿ ಹೆಚ್ಚು ಮತದಾನವಾಗಲು ಪ್ರೇರಣೆಯಾಯಿತು ಎಂದು ವಿವರಿಸಿದರು.

ಕ್ಲಬ್ ಅಧ್ಯಕ್ಷ ಶಂಭು, ಉಪಾಧ್ಯಕ್ಷ ದೇಶಹಳ್ಳಿ ಮೋಹನ್‌ಕುಮಾರ್, ಪತ್ರಕರ್ತರಾದ ಕೌಡ್ಲೆ ಚನ್ನಪ್ಪ, ಎ.ಎಲ್.ಬಸವಗೌಡ, ದೊರೆಸ್ವಾಮಿ, ಬಸವರಾಜು, ದ.ಕೋ.ಹಳ್ಳಿ ಚಂದ್ರಶೇಖರ್, ಕನ್ನಡಸೇನೆ ಮಂಜುನಾಥ್, ಬಿ.ಎಸ್.ಅನುಪಮಾ, ಗೊರವಾಲೆ ಚಂದ್ರಶೇಖರ್, ರಜಿನಿರಾಜ್ ಇತರರಿದ್ದರು.

ಇದೇ ಸಂದರ್ಭದಲ್ಲಿ ಡಿಸಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಎಸ್ಪಿ ಎನ್.ಯತೀಶ್, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ವಾರ್ತಾಧಿಕಾರಿ ಎಸ್.ಎಚ್.ನಿರ್ಮಲಾ ಅವರನ್ನು ಕ್ಲಬ್ ವತಿಯಿಂದ ಅಭಿನಂದಿಸಲಾಯಿತು.