ಪೆರ್ಲ: ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆ, ಎಣ್ಮಕಜೆ ಗ್ರಾಮ ಪಂಚಾಯಿತಿ ಮತ್ತು ಅಕ್ಷಯ ಜಿಲ್ಲಾ ಯೋಜನಾ ಕಚೇರಿಯ ನೇತೃತ್ವದಲ್ಲಿ ಎಣ್ಮಕಜೆ ಗ್ರಾಮ ಪಂಚಾಯಿತಿಯ ಬಜಕೂಡ್ಲು ಕಾನದ ಎಂ.ಬಡ್ಸ್ ಶಾಲೆಯಲ್ಲಿ ಎಬಿಸಿಡಿ ಮೆಗಾ ಶಿಬಿರವನ್ನು ಶನಿವಾರ ಆಯೋಜಿಸಲಾಗಿತ್ತು.
ಶಾಸಕ ಎ.ಕೆ.ಎಂ.ಅಶ್ರಫ್ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್. ಅಧ್ಯಕ್ಷತೆ ವಹಿಸಿದ್ದರು. ಅಕ್ಷಯ ಯೋಜನಾ ವ್ಯವಸ್ಥಾಪಕ ಕಪಿಲ್ ದೇವ್ ಯೋಜನೆ ವಿವರಿಸಿದರು. ಉಪಾಧ್ಯಕ್ಷೆ ರಮ್ಲಾ ಇಬ್ರಾಹಿಂ ಮತ್ತು ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಮುಹಮ್ಮದ್ ಹನೀಫ್ ಮಾತನಾಡಿದರು. ಕಾಸರಗೋಡು ಬುಡಕಟ್ಟು ಅಭಿವೃದ್ಧಿ ಅಧಿಕಾರಿ ಮೋಹನ್‌ದಾಸ್ ಸ್ವಾಗತಿಸಿದರು. ಬುಡಕಟ್ಟು ವಿಸ್ತರಣಾಧಿಕಾರಿ ವೀಣಾ ನಾರಾಯಣನ್ ವಂದಿಸಿದರು.
ಎಣ್ಮಕಜೆ ಗ್ರಾಪಂ ಎಲ್ಲ ಪರಿಶಿಷ್ಟ ಪಂಗಡದ ಸದಸ್ಯರಿಗೆ ಆರು ಮೂಲ ದಾಖಲೆ ಸಿದ್ಧಪಡಿಸಲು ಈ ಶಿಬಿರ ನಡೆಸಲಾಯಿತು. 287 ಮಂದಿ ಜನರಿಗೆ 421 ಸೇವೆಗಳನ್ನು ಒದಗಿಸಲಾಗಿದೆ. ಆಧಾರ್ 72, ಪಡಿತರ ಚೀಟಿ 94, ಚುನಾವಣಾ ಐಡಿ 89, ಆರೋಗ್ಯ ವಿಮೆ 11, ಬ್ಯಾಂಕ್ ಖಾತೆ 12, ಡಿಜಿ ಲಾಕರ್ 103, ವಸತಿ ಪ್ರಮಾಣಪತ್ರ 30 ಮತ್ತು ಇ-ಜಿಲ್ಲಾ ಸೇವೆಗಳನ್ನು 10 ಮಂದಿಗೆ ಒದಗಿಸಲಾಯಿತು.