ಜಿಲ್ಲೆ

ಸತ್ಯ ಧರ್ಮವನ್ನು ರಕ್ಷಿಸುವ ರಕ್ಷಾ ಕವಚ

ವಿರೂಪಾಕ್ಷಯ್ಯ ಗುದ್ನಯ್ಯನವರಮಠ

ಅಬ್ಬಿಗೇರಿ: ಬಾಳಿನ ಭಾಗ್ಯೋದಯಕ್ಕೆ ಧರ್ಮದ ಬೆಳಕು ಬೇಕು. ಭೌತಿಕ ಜೀವನದಲ್ಲಿ ಬಳಲಿ ಬಂದವರಿಗೆ ಶಾಂತಿ, ನೆಮ್ಮದಿ ಕರುಣಿಸುವ ಶಕ್ತಿ ಧರ್ಮಕ್ಕಿದೆ. ಸತ್ಯ ಒಂದು ಧರ್ಮ. ಇದು ಧರ್ಮವನ್ನು ರಕ್ಷಿಸುವ ರಕ್ಷಾ ಕವಚ. ಸತ್ಯದ ರಕ್ಷಾ ಕವಚ ಕಳಚಿದರೆ ಈ ಧರ್ಮ ಸಂಸ್ಕೃತಿ ಪರಂಪರೆ ಮತ್ತು ಆದರ್ಶ ಮೌಲ್ಯಗಳು ಬೆಳೆದುಕೊಂಡು ಬರುವುದು ಕಷ್ಟವಾಗುತ್ತದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅಬ್ಬಿಗೇರಿ ಗ್ರಾಮದಲ್ಲಿ ಜರುಗುತ್ತಿರುವ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಒಂಭತ್ತನೇ ದಿನದ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ದೇವರು ಎಲ್ಲರಲ್ಲಿಯೂ ಇರುವನು. ಆದರೆ, ದೇವರಲ್ಲಿ ಎಲ್ಲರೂ ಇಲ್ಲ. ಸಮಸ್ತ ಜನರ ಭೋಗ, ಮೋಕ್ಷಗಳಿಗೆ ಧರ್ಮವೇ ಮೂಲವಾಗಿದೆ. ಸತ್ಯ ಸೈದ್ಧಾಂತಿಕ ನೆಲೆಗಟ್ಟಿನ ಮೇಲೆ ಭವ್ಯ ಬಾಳಿನ ಸೌಧವನ್ನು ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಶಿವತಪಸ್ಸು, ಶಿವಕರ್ಮ, ಶಿವಜ್ಞಾನ, ಶಿವಜಪ ಮತ್ತು ಶಿವಧ್ಯಾನ ಎಂಬ ಪಂಚ ಯಜ್ಞಗಳ ಮೂಲಕ ಸಂಸ್ಕಾರ ಸದ್ಬೋಧನೆಯನ್ನು ಅರುಹಿ ಸಕಲರನ್ನು ಉದ್ಧರಿಸಿದ್ದಾರೆ. ಅಧರ್ಮದ ವಿರುದ್ಧ ಧರ್ಮದ ದಂಡಯಾತ್ರೆ ಕೈಗೊಂಡು ಜನಮನದ ಶ್ರೇಯಸ್ಸಿಗಾಗಿ ಉಜ್ವಲ ಭವಿಷ್ಯಕ್ಕಾಗಿ ಸದಾ ಶ್ರಮಿಸಿದ್ದಾರೆ. ಅವರು ಬೋಧಿಸಿದ ಅಹಿಂಸಾದಿ ಧ್ಯಾನ ಪರ್ಯಂತರವಾದ ದಶ ಧರ್ಮ ಸೂತ್ರಗಳು ಬದುಕಿ ಬಾಳುವ ಜನಾಂಗಕ್ಕೆ ದಾರಿ ದೀಪ. ನವರಾತ್ರಿಯ ಒಂಭತ್ತನೆಯ ದಿನದಲ್ಲಿ ಸಿದ್ಧಿ ಧಾತ್ರಿ ಹೆಸರಿನಲ್ಲಿ ದೇವಿಯನ್ನು ಆರಾಧಿಸುತ್ತಾರೆ. ಈ ದೇವಿ ಆರಾಧನೆಯಿಂದ ಮನುಷ್ಯನಿಗೆ ಸಿದ್ಧಿ ಪ್ರಾಪ್ತವಾಗುವುದು. ಜೀವಾತ್ಮರಿಗೆ ಸಿದ್ಧಿಯನ್ನು ನೀಡುವುದರಿಂದ ಸಿದ್ಧಿ ಧಾತ್ರಿ ಎಂದು ಪ್ರಸಿದ್ಧಳಾಗಿದ್ದಾಳೆ. ಈ ದೇವಿಯನ್ನು ಪೂಜಿಸುವುದರಿಂದ ಜೀವನದಲ್ಲಿ ಬರುವ ಭಯ ಹಾಗೂ ನೋವು ದೂರವಾಗುತ್ತದೆ ಎಂದರು.

ಕೇಂದ್ರ ಆಹಾರ ಸಚಿವ ಪ್ರಲ್ಹಾದ ಜೋಶಿ ಅವರು, ‘ರುದ್ರಗಣಾಧಿಪ ವೀರಭದ್ರ’ ಎಂಬ ಅಮೂಲ್ಯ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿ, ಭಾರತೀಯ ಪುಣ್ಯ ನಾಡಿನಲ್ಲಿ ಎಲ್ಲರಿಗೂ ಬದುಕಿ ಬಾಳುವ ಅವಕಾಶವನ್ನು ಕೊಟ್ಟಿದೆ. ಅವರವರ ಧರ್ಮ ಅವರಿಗೆ ಶ್ರೇಷ್ಠವಾದರೂ ಇನ್ನೊಂದು ಧರ್ಮದ ಬಗ್ಗೆ ಸಹಿಷ್ಣುತಾ ಮನೋಭಾವ ಬೆಳೆದುಕೊಂಡು ಬರಬೇಕಾಗಿದೆ. ಆಧುನಿಕ ಕಾಲದಲ್ಲಿ ಜಾತಿಗಳು ಬೆಳೆಯುತ್ತಿವೆ ಹೊರತು ಧರ್ಮ ಸಂಸ್ಕೃತಿ ಉಳಿಸಿ ಬೆಳೆಸಲು ಹಿಂಜರಿಯುತ್ತಿದ್ದಾರೆ. ಪರಸ್ಪರ ದ್ವೇಷ, ಅಸೂಯೆಗಳು ಬೆಳೆದು ಸಂಘರ್ಷಕ್ಕೆ ಕಾರಣವಾಗುತ್ತಿವೆ. ಶ್ರೀ ರಂಭಾಪುರಿ ಧರ್ಮಪೀಠ ವಿಶಾಲ ಮನೋಭಾವ ಹೊಂದಿ ಸರ್ವ ಜನಾಂಗದ ಒಳಿತಿಗಾಗಿ ಸದಾ ಶ್ರಮಿಸುತ್ತ ಬಂದಿದೆ. ಶ್ರೀ ರಂಭಾಪುರಿ ಜಗದ್ಗುರುಗಳು ನಡೆಸುವ ದಸರಾ ಧರ್ಮ ಸಮ್ಮೇಳನ ನಮ್ಮ ನಿಮ್ಮೆಲ್ಲರ ಬಾಳಿನಲ್ಲಿ ಸುಖ, ಶಾಂತಿ, ಸಂತೋಷ ಉಂಟು ಮಾಡುತ್ತದೆ ಎಂದರು.

ಕವಲೇದುರ್ಗ ಭುವನಗಿರಿ ಮಠದ ಮರುಳಸಿದ್ಧ ಶಿವಾಚಾರ್ಯರು ನೇತೃತ್ವ ವಹಿಸಿ ಮಾತನಾಡಿ, ಧರ್ಮವಿಲ್ಲದೇ ಯಾರೂ ಬದುಕಿ ಬಾಳಲು ಸಾಧ್ಯವಿಲ್ಲ. ಧರ್ಮದಿಂದ ದೂರವಾದರೆ ನೀರಿನಿಂದ ಮೀನನ್ನು ಹೊರ ತೆಗೆದರೆ ಹೇಗೆ ಅದರ ಪ್ರಾಣ ಹೋಗುವುದೋ ಹಾಗೆಯೇ ಧರ್ಮ ಉಲ್ಲಂಘಿಸಿ ನಡೆದವರ ಜೀವನ ಪತನಗೊಳ್ಳುತ್ತದೆ ಎಂದರು.

ಸಮ್ಮುಖ ವಹಿಸಿದ್ದ ಜಕ್ಕಲಿ ಹಿರೇಮಠದ ವಿಶ್ವಾರಾಧ್ಯ ಶಿವಾಚಾರ್ಯರು ಮಾತನಾಡಿ, ಭವ ಬಂಧನ ಕಳೆಯಲು ಗುರುವಿಗೆ ಮಾತ್ರ ಸಾಧ್ಯ ಹೊರತು ಬೇರಾರಿಂದಲೂ ಸಾಧ್ಯವಾಗದು. ಪರಶಿವನ ಇನ್ನೊಂದು ಸಾಕಾರ ರೂಪವೇ ಗುರುವಾಗಿ ಬಾಳ ಬದುಕಿಗೆ ಬೆಳಕು ತೋರುವವನು ಎಂದರು.

ನೆಗಳೂರು ಹಿರೇಮಠದ ಗುರುಶಾಂತೇಶ್ವರ ಶ್ರೀಗಳು ಮಾತನಾಡಿ, ಶಾಸ್ತ್ರದಲ್ಲಿ ನಿರೂಪಿಸಿದ ತತ್ವ ಸಿದ್ಧಾಂತಗಳನ್ನು ಆಚರಿಸಿಕೊಂಡು ಬಂದರೆ ಆರೋಗ್ಯ ಪೂರ್ಣ ಜೀವನ ಕಟ್ಟಿಕೊಳ್ಳಲು ಸಾಧ್ಯ ಎಂದರು.

ಅಬ್ಬಿಗೇರಿ-ಸಿದ್ಧರಬೆಟ್ಟದ ವೀರಭದ್ರ ಶಿವಾಚಾರ್ಯರು ಮಾತನಾಡಿ, ಕಾರ್ಯಕ್ರಮದ ಯಶಸ್ಸಿಗಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.

ಲಿಂ. ಸೋಮಶೇಖರ ಶಿವಾಚಾರ್ಯರ ಕುರಿತ ಕೃತಿಯನ್ನು ಶಾಸಕ ಜಿ.ಎಸ್. ಪಾಟೀಲ ಬಿಡುಗಡೆಗೊಳಿಸಿದರು.

ಶ್ರೀ ಪೀಠದ ವಾರ್ತಾ ಸಂಕಲನ ಬಿಡುಗಡೆಗೊಳಿಸಿ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಮನುಷ್ಯ ಜೀವನದಲ್ಲಿ ಮೂರು ತತ್ವಗಳಿವೆ. ಅವುಗಳನ್ನು ಅರಿಯುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ. ನೀರು, ಅನ್ನ, ಸಜ್ಜನರ ಒಳ್ಳೆಯ ಮಾತು ಜೀವನದ ಉನ್ನತಿಗೆ ಮತ್ತು ಶ್ರೇಯಸ್ಸಿಗೆ ಉತ್ತೇಜನ ನೀಡುತ್ತವೆ. ರಂಭಾಪುರಿ ಜಗದ್ಗುರುಗಳು ಧರ್ಮ ಸಮಾರಂಭದಲ್ಲಿ ನುಡಿದ ಮಾತುಗಳು ವಾರ್ತಾ ಪತ್ರಿಕೆಗಳಲ್ಲಿ ಸುದ್ದಿ ರೂಪದಲ್ಲಿ ಒಂದೆಡೆ ಸೇರಿಸಿ ಪ್ರಕಟಗೊಳ್ಳುತ್ತಿರುವುದು ಜಗದ್ಗುರುಗಳ ಕ್ರಿಯಾಶೀಲತೆಗೆ ಸಾಕ್ಷಿಯಾಗಿವೆ ಎಂದರು.

ಚಿತ್ರನಟ ದೊಡ್ಡಣ್ಣ ಮಾತನಾಡಿ, ನಮ್ಮ ಧರ್ಮದಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಗುರುವನ್ನು ನರನೆಂದವಗೆ ಲಿಂಗಕ್ಕೆ ಶಿಲೆಯೆಂದವಗೆ ನಾಯಕ ನರಕ ತಪ್ಪದು ಎಂದು ಸರ್ವಜ್ಞ ಕವಿ ಎಚ್ಚರಿಸಿದ್ದಾನೆ. ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎಂದು ಸಾರಿರುವುದು ಬಾಳೆಹೊನ್ನೂರಿನ ಶ್ರೀ ಜಗದ್ಗುರು ರಂಭಾಪುರಿ ಪೀಠ ಎಂದರು.

ಗುರುರಕ್ಷೆ: ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ಚಿಮ್ಮಲಗಿ ಹಿರೇಮಠದ ಸಿದ್ಧರೇಣುಕ ಶಿವಾಚಾರ್ಯರು, ಸಿದ್ಧನಕೊಳ್ಳ-ಮಾರನಬಸರಿ ಶಿವಕುಮಾರ ಸ್ವಾಮೀಜಿ, ಚಂದ್ರಶೇಖರ ದೇವರು ಗದಗ, ವಿ. ನಟರಾಜು ಮಾವಿನನಕುರ್ಕೆ, ಮಹಾದೇವಮ್ಮನವರು ಬೆನಾಳ, ಬಿ.ಆರ್. ಹಿರೇಮಠ ಬೆಂಗಳೂರು, ಗದಗದ ವೀರೇಶ ಕೂಗುಮಠ, ಬಸವರಾಜ ಕೂಗುಮಠ ಕುಟುಂಬದವರು, ಆರ್.ಆರ್. ಹಿರೇಮಠ, ಹರೀಶ್ ದಾವಣಗೆರೆ, ಹರೀಶ ಹಿರಿಯೂರು, ಬಾಳಯ್ಯ ಇಂಡಿಮಠ, ಶರಣುಗೌರ ಪಾಟೀಲ ಅವರಿಗೆ ಶ್ರೀ ರಂಭಾಪುರಿ ಜಗದ್ಗುರುಗಳು ಗುರುರಕ್ಷೆ ನೀಡಿ ಆಶೀರ್ವದಿಸಿದರು.

ಶ್ರೀ ಮದ್ವೀರಶೈವ ಸ.ಸಂ. ಬೆಂಗಳೂರು ಜಿಲ್ಲಾ ಘಟಕದ ಅಧ್ಯಕ್ಷ ಬೀರೂರು ಶಿವಸ್ವಾಮಿ ಸ್ವಾಗತಿಸಿದರು. ಆಂಧ್ರಪ್ರದೇಶದ ಅ.ಭಾ. ವೀರಶೈವ ಮಹಾಸಭಾ ಅಧ್ಯಕ್ಷ ಶಿವಾನಂದಪ್ಪ, ಡಾ. ಐ.ಎಸ್. ಪಾಟೀಲ ಭಾಗವಹಿಸಿದ್ದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಸಾಧಕರಿಂದ ವೇದಘೊಷ, ಗದಗಿನ ಗಾನಭೂಷಣ ವೀರೇಶ ಕಿತ್ತೂರ ಅವರಿಂದ ಸಂಗೀತ ಜರುಗಿತು. ಶಿವಮೊಗ್ಗದ ಶಾಂತಾ ಆನಂದ ಹಾಗೂ ಸವಣೂರಿನ ಡಾ. ಗುರುಪಾದಯ್ಯ ಸಾಲಿಮಠ ನಿರೂಪಿಸಿದರು.