ಉಳ್ಳಾಲ: ಕುಟುಂಬ ಮತ್ತು ನಾಡಿನ ಜನರನ್ನು ಉಳಿಸಲು ಅಬ್ಬಕ್ಕ ಮಾಡಿದ ಹೋರಾಟ ಆಕೆಯ ಶೌರ್ಯಕ್ಕೆ ಸಾಕ್ಷಿ, ಆಕೆಯ ಸೈನ್ಯದಲ್ಲಿ ಜೈನರು, ಅದರಲ್ಲೂ ಬ್ಯಾರಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಕೊನೆಗಾಲದಲ್ಲಿ ಅಬ್ಬಕ್ಕ ಮಸೀದಿಯಲ್ಲಿ ರಕ್ಷಣೆ ಪಡೆದಿದ್ದಳು ಎಂದು ಸಾಹಿತಿ, ಕಾದಂಬರಿಗಾರ್ತಿ ಉಷಾ ಪಿ.ರೈ. ಅಭಿಪ್ರಾಯಪಟ್ಟರು.
ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಆಶ್ರಯದಲ್ಲಿ ಅಸೈಗೋಳಿಯ ಕೇಂದ್ರ ಮೈದಾನದಲ್ಲಿ ಎರಡು ದಿನ ನಡೆದ ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅಬ್ಬಕ್ಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.
ಚರಿತ್ರೆಗಾರರು ಅಬ್ಬಕ್ಕಳನ್ನು ಮರೆತ ಕಾರಣ ನಾವು ಶಾಲೆಯಲ್ಲಿ ಓದುತ್ತಿದ್ದಾಗ ಅಬ್ಬಕ್ಕಳ ಚರಿತ್ರೆ ಪುಸ್ತಕಗಳಲ್ಲಿ ಇರಲಿಲ್ಲ. ಆದರೆ ಹೊರ ಜಿಲ್ಲೆಯ ಚರಿತ್ರೆಗಾರರು ಹೆಚ್ಚಾಗಿ ನೆನಪಿಸಿಕೊಂಡಿದ್ದರು. ನಾವು ಎಲ್ಲೇ ಇದ್ದರೂ ಜನಿಸಿ, ಬೆಳೆದ ಊರನ್ನು ಮರೆಯಬಾರದು. ಅಬ್ಬಕ್ಕ ಉತ್ಸವ ಕೇವಲ ಉಳ್ಳಾಲಕ್ಕೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ನಡೆಯಲಿ ಎಂದು ಹಾರೈಸಿದರು.
ಹಿಂದೆಲ್ಲ ಹಿಂದು, ಮುಸ್ಲಿಂ, ಕ್ರೈಸ್ತರ ನಡುವೆ ಘರ್ಷಣೆ ನಡೆದ ನೆನಪಿಲ್ಲ. ಈಗಿನ ಮಕ್ಕಳು ನಡೆದುಕೊಳ್ಳುವ ರೀತಿ ಭಯ ಹುಟ್ಟಿಸುತ್ತದೆ. ಜಾತಿ, ಮತಗಳ ಕಾರಣಕ್ಕೆ ಬೆಂಕಿ ಹೊತ್ತಿ ಉರಿದಾಗ ಬೇಸರವಾಗುತ್ತದೆ. ಹಿಂದೆ ಇಲ್ಲದ ಎಡ, ಬಲ ಎನ್ನುವ ಪದ ಇಂದು ಹುಟ್ಟಿಕೊಂಡಿರುವುದರಿಂದ ಮಾತನಾಡಲು ಹಿಂಜರಿಕೆಯಾಗುತ್ತದೆ. ಆಳುವವರು ಯಾರೇ ಆದರೂ ದೇಶ ನಮ್ಮದು ಎಂದು ಭಾವಿಸಿದಾಗ ಯಾವುದೇ ಅಹಿತಕರ ಘಟನೆಗಳು ನಡೆಯದು. ಪಾಲಕರು ಮಕ್ಕಳಿಗೆ ಕೊಡುವ ದೊಡ್ಡ ಆಸ್ತಿಯೇ ವಿದ್ಯೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಾಹಿತಿ, ಕಾಂದಬರಿಗಾರ್ತಿ ಉಷಾ ಪಿ.ರೈ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀೀಮಾ ಪ್ರಿಯದರ್ಶಿನಿ ಅವರಿಗೆ ಅಬ್ಬಕ್ಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಶಾಸಕ ಯು.ಟಿ.ಖಾದರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್, ಸಹಾಯಕ ಆಯುಕ್ತ ಮದನ್ ಮೋಹನ್, ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್, ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ಮೊದಲಾದವರು ಉಪಸ್ಥಿತರಿದ್ದರು. ಬಬಿತಾ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ವಂದಿಸಿದರು. ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು.
ರಾಣಿ ಅಬ್ಬಕ್ಕ ತಾಯ್ನಡಿಗಾಗಿ ಮಾತ್ರವಲ್ಲ, ತನ್ನ ಬದುಕನ್ನೇ ತ್ಯಾಗ ಮಾಡಿದ್ದಾರೆ. ಇಂದು ರಾಷ್ಟ್ರ ಪ್ರೇಮಿಗಳಿಗೆ ಯಾರದ್ದಾದರೂ ಹೆಸರು ನೆನಪು ಬರುವುದಾದರೆ ಮೊದಲ ಹೆಸರು ಅಬ್ಬಕ್ಕಳದ್ದಾಗಿರಬೇಕು. ಅಬ್ಬಕ್ಕ ಉತ್ಸವ ಯಶಸ್ವಿಯಾಗಿ ನಡೆದಿದ್ದು ಜಿಲ್ಲಾಡಳಿತಕ್ಕೆ ಗೌರವ ತಂದಿದೆ. ನನೆಗುದಿಗೆ ಬಿದ್ದಿರುವ ಅಬ್ಬಕ್ಕ ಭವನ ಎಂಟು ಕೋಟಿ ರೂ.ವೆಚ್ಚದಲ್ಲಿ ಶೀಘ್ರ ಆರಂಭಗೊಳ್ಳಲಿದೆ. ಕೋಟಾ ಶ್ರೀನಿವಾಸ ಪೂಜಾರಿ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ