ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ಸ್ಥಳೀಯ ಯೋಜನಾ ವಿಭಾಗ (ಎಲ್‌ಪಿಎ)ದಡಿ 46 ಗ್ರಾಮಗಳನ್ನು ಸೇರ್ಪಡೆಗೊಳಿಸಿ ಹೊರಡಿಸಿರುವ ಆದೇಶವನ್ನು 10 ದಿನದೊಳಗೆ ರದ್ದುಪಡಿಸಲು ಆಗ್ರಹಿಸಿ ಸಮೀಪದ ನವನಗರ ಬಳಿಯ ಹುಡಾ ಕಚೇರಿ ಎದುರು ರತ್ನಭಾರತ ರೈತ ಸಮಾಜದಿಂದ ಸೋಮವಾರ ಪ್ರತಿಭಟನೆ ನಡೆಯಿತು.
ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರವು ಈಚೆಗೆ ಹೊಸದಾಗಿ 46 ಗ್ರಾಮಗಳನ್ನು ತನ್ನ ವ್ಯಾಪ್ತಿಗೆ ಸೇರಿಸಿಕೊಂಡಿದೆ. ಈಗಾಗಲೇ ಸರಿಯಾದ ಬೆಳೆ ಇಲ್ಲದೆ ರೈತರು ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೊಸ ಸೇರ್ಪಡೆಯಿಂದಾಗಿ ಈ ಹಳ್ಳಿಗಳು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡಲಿದ್ದು, ರೈತರು ಅತಿ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಗ್ರಾಮೀಣ ಭಾಗದಲ್ಲಿ ಶೇ. 95ರಷ್ಟು ರೈತರು ಮತ್ತು ಕೂಲಿ ಕಾರ್ಮಿಕರಿದ್ದು, ಗ್ರಾಮ ಪಂಚಾಯಿತಿ ತೆರಿಗೆಯನ್ನೇ ಕಟ್ಟಲು ಪರದಾಡುತ್ತಿದ್ದಾರೆ. ಪ್ರಾಧಿಕಾರದ ವ್ಯಾಪ್ತಿಗೆ ಬಂದರೆ ತೆರಿಗೆ ಭಾರ ಹೆಚ್ಚಲಿದೆ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಹು-ಧಾ ಈಗಾಗಲೇ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ನೆಮ್ಮದಿ ಜೀವನ ನಡೆಸುತ್ತಿರುವ ರೈತರ ಮೇಲೆ ಕಣ್ಣು ಹಾಕಿರುವುದು ಸರಿಯಲ್ಲ. ನಗರಾಭಿವೃದ್ಧಿ ಪ್ರಾಧಿಕಾರ ಈಗಾಗಲೇ ತನ್ನ ವ್ಯಾಪ್ತಿಗೆ ತೆಗೆದುಕೊಂಡಿರುವ ಹಳ್ಳಿಗಳನ್ನು ಅಭಿವೃದ್ಧಿಪಡಿಸಿಲ್ಲ. ಈಗ ಮತ್ತೆ 46 ಹಳ್ಳಿಗಳನ್ನು ಸೇರಿಸಿಕೊಂಡಿರುವುದು ಆಕ್ಷೇಪಾರ್ಹ. ಆದ್ದರಿಂದ ಕೂಡಲೇ 10 ದಿನಗಳೊಳಗೆ ಈ 46 ಹಳ್ಳಿಗಳನ್ನು ಪ್ರಾಧಿಕಾರದ ವ್ಯಾಪ್ತಿಯಿಂದ ಕೈಬಿಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ತೀವ್ರ ಗೊಳಿಸಲಾಗುವುದು ಎಂದರು.
ಹುಡಾ ಅಧ್ಯಕ್ಷರು ಹಾಗೂ ಆಯುಕ್ತರ ಮೂಲಕ ರೈತರು ರಾಜ್ಯ ಸರ್ಕಾರಕ್ಕೆ ಮನವಿ ರವಾನಿಸಿದರು.
ರತ್ನಭಾರತ ರೈತ ಸಮಾಜದ ಉಪಾಧ್ಯಕ್ಷ ಹೇಮನಗೌಡ ಬಸನಗೌಡ್ರ, ಸಿ.ಎಂ. ಕಡಗಿ, ವಿರೂಪಾಕ್ಷ ಗಣಿ, ಶಿವಪ್ಪ ದೊಡ್ಡಮನಿ, ಬಸವರಾಜ ಅಣ್ಣಿಗೇರಿ, ಸಕ್ರಪ್ಪ ಕಮ್ಮಾರ, ರಾಜು ಮಲ್ಲಿಗವಾಡ, ಬಸವರಾಜ ಹಕಾರಿ, ಕುಬೇರಪ್ಪ ಕಂಬಳಿ, ಚನ್ನಬಸಪ್ಪ ಸಿದ್ದಣ್ಣವರ, ಜಯಪ್ಪ ಕಮಡೊಳ್ಳಿ, ಲಕ್ಷ್ಮಣಗೌಡ ಶಿವನಗೌಡ್ರ, ರಾಜಶೇಖರ ಪಾಟೀಲ, ಸುನೀಲ ಯಲಿಗಾರ ಇತರರು ಇದ್ದರು.