ಹನೂರು: ನೇಯ್ದ ಸೀರೆಗಳಿಗೆ ಹನೂರಿನಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಕೈನಲ್ಲಿ ಕಸುಬಿದ್ದರೂ ರೇಷ್ಮೆ ಕೊಳ್ಳಲು ಹಣವಿಲ್ಲದ ಪರಿಣಾಮ ಕೂಲಿಗಾಗಿ ದುಡಿಯುತ್ತಿದ್ದೇವೆ. ತಿಂಗಳಲ್ಲಿ 15 ದಿನ ಕೆಲಸ ಸಿಗುವುದೇ ಹೆಚ್ಚು. ಇದರಿಂದ ಸಿಗುವ ಆದಾಯವೂ ಕಡಿಮೆ. ಹಾಗಾಗಿ ಜೀವನ ನಡೆಸುವುದೇ ದುಸ್ತರವಾಗಿದೆ. ಇದರಿಂದಾಗಿ ಕೆಲವರು ವೃತ್ತಿಯನ್ನು ತ್ಯಜಿಸಿ ಉದ್ಯೋಗವನ್ನು ಅರಸಿ ಗುಳೆ ಹೋಗಿದ್ದಾರೆ. ಆದರೆ ಸರ್ಕಾರ ಈ ಬಗ್ಗೆ ಗಮನ ನೀಡುತ್ತಿಲ್ಲ.
ಇದು ನಂ.1 ಕನ್ನಡ ದಿನಪತ್ರಿಕೆ ವಿಜಯವಾಣಿ ವತಿಯಿಂದ ಶುಕ್ರವಾರ ಹನೂರಿನ ಆರ್.ಎಸ್ ದೊಡ್ಡಿಯ ಶ್ರೀ ಚೌಡೇಶ್ವರಿ ರೇಷ್ಮೆ ಕೈಮಗ್ಗ ನೇಕಾರರ ಸಂಘದಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ನೇಕಾರರು ತಮ್ಮ ಸಮಸ್ಯೆಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
ಸುಮಾರು 30 ವರ್ಷದ ಹಿಂದೆಯೇ ಸ್ಥಾಪನೆಯಾದ ಈ ಸಂಘದಲ್ಲಿ ರೇಷ್ಮೆ ಸೀರೆಯನ್ನು ನೇಯುವ ಕಾಯಕದಲ್ಲಿ ತೊಡಗಿದ್ದೇವೆ. ಆರ್ಥಿಕವಾಗಿ ಹಿಂದುಳಿದಿರುವ ನಮಗೆ ರೇಷ್ಮೆಯನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಾಗಿ ತಮಿಳುನಾಡಿನಿಂದ ಸೀರೆ ಕಂಪನಿಯವರು ರೇಷ್ಮೆ ನೂಲನ್ನು ನೀಡುತ್ತಿದ್ದಾರೆ. ಒಂದು ಸೀರೆಯನ್ನು ನೇಯ್ಯಬೇಕಾದರೆ ಕನಿಷ್ಟ 3 ದಿನ ಬೇಕಾಗುತ್ತದೆ. ಆದರೆ ಮಾರುಕಟ್ಟೆ ವ್ಯವಸ್ಥೆಯೇ ಇಲ್ಲದ ಪರಿಣಾಮ ನೇಯ್ದ ಸೀರೆಯನ್ನು 800-1000 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದರಿಂದ ಜೀವನ ನಿರ್ವಹಣೆ ಕಷ್ಟಸಾಧ್ಯವಾಗಿದೆ. ಮಕ್ಕಳಿಗೆ ಶಿಕ್ಷಣ ಕೊಡಿಸಲು ತೊಂದರೆ ಅನುಭವಿಸಬೇಕಿದೆ. ಆದ್ದರಿಂದ ರೇಷ್ಮೆ ಮತ್ತು ಜವಳಿ ಖಾತೆಯಿಂದ ರೇಷ್ಮೆ ನೂಲನ್ನು ನೀಡಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾಗಲಿದೆ ಎಂಬ ಮಾತು ನೆರೆದಿದ್ದ ನೇಕಾರರಿಂದ ಒಕ್ಕೊರಲಿನಿಂದ ಕೇಳಿ ಬಂತು.
ಉದ್ಯೋಗಕ್ಕಾಗಿ ಗುಳೆ ಹೋಗಿದ್ದಾರೆ: ಸಂಘದ ನಿರ್ದೇಶಕ ಕಾಂತರಾಜು ಮಾತನಾಡಿ, ಈ ಹಿಂದೆ 100ಕ್ಕೂ ಹೆಚ್ಚು ಜನರು ಕೈಮಗ್ಗದಲ್ಲಿ ರೇಷ್ಮೆ ಸೀರೆ ನೇಯ್ಯುವ ಕಾಯಕದಲ್ಲಿ ತೊಡಗಿದ್ದರು. ಆದರೆ ಸರ್ಕಾರದಿಂದ ಸವಲತ್ತುಗಳ ಸಮರ್ಪಕವಾಗಿ ಸಿಗದಿರುವುದು ಒಂದೆಡೆಯಾದರೆ ಪ್ರಸ್ತುತ ಈ ವೃತ್ತಿಯಲ್ಲಿ ಬರುವ ಆದಾಯವೂ ಕಡಿಮೆಯಾಗಿದೆ. ಇದರಿಂದ ಜೀವನ ನಡೆಸಲು ಕಷ್ಟವಾಗಿದೆ.
ಹಾಗಾಗಿ ಇದರಿಂದ ಆಸಕ್ತಿ ಕಳೆದುಕೊಂಡ ಬಹುತೇಕರು ಉದ್ಯೋಗವನ್ನು ಅರಸಿ ಬೆಂಗಳೂರು, ಮೈಸೂರು ಹಾಗೂ ತಮಿಳುನಾಡಿಗೆ ಗುಳೆ ಹೋಗಿದ್ದಾರೆ. ಸದ್ಯ 20 ಕುಟುಂಬಗಳಲ್ಲಿ ಮಾತ್ರ ಈ ಕಾಯಕದಲ್ಲಿ ಮುಂದುವರಿದಿದ್ದು, ಕಷ್ಟದ ನಡುವೆ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ರೇಷ್ಮೆ ಸೀರೆ ನೇಯುವ ವೃತ್ತಿ ಕಣ್ಮರೆಯಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ನೇಕಾರರಿಗೆ ಸರ್ಕಾರದಿಂದ ಸವಲತ್ತುಗಳು ಒದಗಿಸಿಕೊಡುವುದರ ಪ್ರೋತ್ಸಾಹ ನೀಡುವಂತಹ ಕೆಲಸವಾಗಬೇಕು ಎಂದು ನುಡಿದರು.
ಮೂಲ ಸೌಕರ್ಯ ಕೊರತೆ: ಆರ್.ಎಸ್ ದೊಡ್ಡಿಯ ನೇಕಾರರ ಬಡಾವಣೆಯಲ್ಲಿ 20ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಚರಂಡಿ ವ್ಯವಸ್ಥೆಯಿಲ್ಲದ ಪರಿಣಾಮ ಮಳೆ ಬಂತೆಂದರೆ ಮನೆಗೆ ನೀರು ನುಗ್ಗುತ್ತದೆ. ಇನ್ನು ಕೆಲವು ವಿದ್ಯುತ್ ಕಂಬಗಳಲ್ಲಿ ಬಲ್ಬ್ ಅಳವಡಿಸಿಲ್ಲ. ಇತ್ತ ಬಡಾವಣೆಯಲ್ಲಿ ಗಿಡಗಂಟೆಗಳು ಬೆಳೆದು ಹಾವುಗಳು ಕಾಣಿಸಿಕೊಳ್ಳುತ್ತಿದ್ದು, ಜೀವಭಯ ಕಾಡುತ್ತಿದೆ. ಜತೆಗೆ ಕಾಡು ಹಂದಿಗಳ ಕಾಟ ಅನುಭವಿಸುತ್ತಿದ್ದೇವೆ. ಈ ಸಂಬಂಧ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಉಮಾ ಒತ್ತಾಯಿಸಿದರು.
ಪ್ರೋತ್ಸಾಹ ಧನ ನೀಡಿಲ್ಲ: ಕೋವಿಡ್ ಹಿನ್ನೆಲೆಯಲ್ಲಿ ನೇಕಾರರ ಜೀವನ ಮಟ್ಟವನ್ನು ಸುಧಾರಿಸುವ ಸಲುವಾಗಿ ಸರ್ಕಾರದಿಂದ 5 ಸಾವಿರ ರೂ. ಪ್ರೋತ್ಸಾಹ ನೀಡಲಾಗುತ್ತಿದೆ. ಈಗಾಗಲೇ 2 ಬಾರಿ ಇದರ ಪ್ರಯೋಜನ ಪಡೆಯಲಾಗಿದೆ. ಆದರೆ ಈ ವರ್ಷ ಪ್ರೋತ್ಸಾಹಧನ ನೀಡಿಲ್ಲ. ಈ ಬಗ್ಗೆ ಸಂಬಂಧಪಟ್ಟವರನ್ನು ವಿಚಾರಿಸಿದರೆ ಇಲ್ಲಸಲ್ಲದ ಕಾರಣ ಹೇಳುತ್ತಾರೆ. ಆದ್ದರಿಂದ ಸಂಬಂಧಪಟ್ಟವರು ಪ್ರೋತ್ಸಾಹಧನ ನೀಡಲು ಕ್ರಮವಹಿಸಬೇಕು. ಇದರಿಂದ ಜೀವನ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ರವಿ ಎಂಬುವವರು ಮನವಿ ಮಾಡಿದರು.
ಒಟ್ಟಿನಲ್ಲಿ ಹನೂರು ಭಾಗದಲ್ಲಿ ನೇಕಾರರು ಕಡಿಮೆ ಸಂಪಾದನೆಯಿಂದ ಜೀವನ ನಡೆಸುವುದು ಕಷ್ಟವಾಗಿದೆ. ಇದರಿಂದ ವೃತ್ತಿಯ ಬಗ್ಗೆ ಬಹುತೇಕರಲ್ಲಿ ಆಸಕ್ತಿ ಕಡಿಮೆಯಾಗಿದೆ. ಆದ್ದರಿಂದ ಸರ್ಕಾರ ಈ ಬಗ್ಗೆ ಗಮನಹರಿಸಿ ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ. ಸಂವಾದದಲ್ಲಿ ಶ್ರೀನಿವಾಸ್, ಮಂಜುನಾಥ್, ರೇಖಾ, ರಾಧಾ, ಕಮಲಮ್ಮ, ಶಾಂತಮ್ಮ ಇತರರು ಇದ್ದರು.
3 ಸಾವಿರದಲ್ಲಿ ಜೀವನ ನಡೆಸುವುದು ಹೇಗೆ?: ಕಲಿತಿರುವ ವೃತ್ತಿಯನ್ನು ಕೈಬಿಡಬಾರದು ಎನ್ನುವ ಉದ್ದೇಶದಿಂದ ಇಂದಿಗೂ ಕೈಮಗ್ಗದಿಂದ ರೇಷ್ಮೆ ಸೀರೆ ನೇಯ್ಯುವ ಕಾಯಕದಲ್ಲಿ ತೊಡಗಿದ್ದೇವೆ. ಆರ್ಥಿಕವಾಗಿ ದುರ್ಬಲರಾಗಿರುವ ನಮಗೆ ಬಂಡವಾಳ ತೊಡಗಿಸಿ ಸ್ವ ಉದ್ಯೋಗ ಕೈಗೊಳ್ಳಲು ಸಾಧ್ಯವಿಲ್ಲ. ಇದರಿಂದ ಸೀರೆಯನ್ನು ಕೂಲಿಗಾಗಿ ನೇಯ್ಯುತ್ತಿದ್ದೇವೆ. ಆದರೆ ತಿಂಗಳಲ್ಲಿ 15 ದಿನ ಈ ಕೆಲಸ ಸಿಗುವುದೇ ಹೆಚ್ಚು. ಇದರಿಂದ ಸಿಗುವ ಸಂಭಾವನೆ ತಿಂಗಳಿಗೆ 3 ಸಾವಿರ ರೂ. ಮಾತ್ರ. ಇದರಿಂದ ಜೀವನ ನಡೆಸಲು ಸಾಧ್ಯವೇ? ಇದರಿಂದ ಆರ್ಥಿಕವಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದೇವೆ. ಹಾಗಾಗಿ ಜೀವನ ನಿರ್ವಹಣೆಗೆ ಸಾಲ ಮಾಡುವ ಪರಿಸ್ಥಿತಿ ಇದೆ. ಆದರೆ ಸರ್ಕಾರ ನೇಕಾರರ ಕ್ಷೇಮಾಭಿವೃದ್ಧಿಯನ್ನು ಪರಿಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎಂದು ಸಂಘದ ಸದಸ್ಯ ಲಕ್ಷ್ಮೀ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದರು.
ಮನೆ ಸಾಲ ಮನ್ನಾವಾಗಬೇಕು: ನೇಕಾರ ವೃತ್ತಿಯಲ್ಲಿ ತೊಡಗಿರುವ ಹಿರಿಯ ಮುಖಂಡ ನಾರಾಯಣ್ ಮಾತನಾಡಿ, ನೇಕಾರರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕಳೆದ ಹಲವು ವರ್ಷಗಳ ಹಿಂದೆ ಪಟ್ಟಣ ಸಮೀಪದ ಆರ್.ಎಸ್ ದೊಡ್ಡಿಯ ಬಳಿ ನಿವೇಶನದ ಜತೆಗೆ 15 ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟಿದೆ. ನಿವೇಶನಕ್ಕೆ 2 ಸಾವಿರ ರೂ. ಹಾಗೂ ಮನೆ ನಿರ್ಮಾಣಕ್ಕೆ 19 ಸಾವಿರ ರೂ. ಕಂತಿನಲ್ಲಿ ಪಾವತಿಸುವಂತೆ ಬ್ಯಾಂಕ್ ಮೂಲಕ ಸೂಚಿಸಲಾಗಿತ್ತು. ಇದರಲ್ಲಿ ಕೆಲವರು ಹಣವನ್ನು ಪಾವತಿಸುತ್ತಿದ್ದಾರೆ. ಆದರೆ ಜೀವನ ನಡೆಸುವುದೇ ಕಷ್ಟಕರವಾಗಿರುವಾಗ ಕಡು ಬಡತನ ವರ್ಗಕ್ಕೆ ಸೇರಿದ ಕೆಲವರು ಹಣ ಪಾವತಿಸಲು ಸಾಧ್ಯವಾಗಿಲ್ಲ. ಹಣ ಪಾವತಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ. ಇದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಇನ್ನಷ್ಟು ಸಂಕಷ್ಟಕ್ಕೆ ನೂಕಿದಂತಾಗಿದೆ. ಆದ್ದರಿಂದ ರೇಷ್ಮೆ ಮತ್ತು ಜವಳಿ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಅರಿತು ಸಾಲ ಮನ್ನಾ ಮಾಡಬೇಕಿದೆ ಎಂದು ಆಗ್ರಹಿಸಿದರು.