ಹುನಗುಂದ ಸಮೀಪದ ಅಮರಾವತಿ ಗ್ರಾಮದಲ್ಲಿ ಕೈಗೊಂಡ ಮಹಾಂತ ಜೋಳಿಗೆ ಸಂಚಾರದಲ್ಲಿ ಗುರುಮಹಾಂತ ಸ್ವಾಮಿಗಳು ಜೋಳಿಗೆಗೆ ದುಶ್ಚಟಗಳನ್ನು ಪಡೆದು ಮಾತನಾಡಿದರು. ಮರೆಗುದ್ದಿ ವಿರಕ್ತಮಠದ ಗುರುಮಹಾಂತ ಸ್ವಾಮಿಗಳು, ಡಾ.ಮಹಾಂತೇಶ ಕಡಪಟ್ಟಿ ಉಪಸ್ಥಿತರಿದ್ದರು. 
ಜಿಲ್ಲೆ

ಶುದ್ಧ ಕಾಯ ಕಾಪಾಡಲು ದುಶ್ಚಟ ತ್ಯಜಿಸಿ

ಹುನಗುಂದ: ಶುದ್ಧ ಆಹಾರ ಸೇವಿಸಿ ಸಮಾಜದಲ್ಲಿ ಮತ್ತು ಜೀವನದಲ್ಲಿ ಶುದ್ಧ ಕಾಯವನ್ನು ಕಾಪಾಡಿಕೊಳ್ಳುವುದು ಅಷ್ಟೇ ಮುಖ್ಯವೆಂದು ಚಿತ್ತರಗಿ ವಿಜಯ ಮಹಾಂತೇಶ ಸಂಸ್ಥಾನಮಠದ ಗುರುಮಹಾಂತ ಸ್ವಾಮಿಗಳು ಹೇಳಿದರು.

ಪಟ್ಟಣದ ಬಸವ ಮಂಟಪದಲ್ಲಿ ನಡೆಯುತ್ತಿರುವ ಲಿಂ. ಮಹಾಂತ ಶಿವಯೋಗಿಗಳ 6ನೇ ಶರಣೋತ್ಸವ ಮತ್ತು ಮಹಾಂತ ಜೋಳಿಗೆ ಸಂಚಾರ, ಶರಣ ಸಿದ್ಧಾಂತ ವಿದ್ಯಾಪೀಠದ 54ನೇ ಶಿವಾನುಭವ ತರಬೇತಿ ಶಿಬಿರ ನಿಮಿತ್ತ ಸಮೀಪದ ಅಮರಾವತಿ ಗ್ರಾಮದ ಬೈಲ ಬಸವೇಶ್ವರ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಮಹಾಂತ ಜೋಳಿಗೆಗೆ ದುಶ್ಚಟ ಹಾಕುವಂತೆ ಜನರನ್ನು ಕೋರಿ ಮಾತನಾಡಿದ ಅವರು, ಮಹಾಂತ ಜೋಳಿಗೆ 4 ದಶಕಕ್ಕೂ ಹೆಚ್ಚು ಕಾಲದಿಂದ ಬಹುತೇಕ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಜನರ ದುಶ್ಚಟಗಳನ್ನು ಪಡೆದು ಸ್ವಸ್ಥ ಸಮಾಜ ನಿರ್ಮಾಣ ಮಾಡಿದೆ ಎಂದರು.

ಸದ್ಯ ಹಿರಿಯರ ನಿರ್ಲಕ್ಷೃದಿಂದ ಯುವಕರು ದಾರಿ ತಪ್ಪುತ್ತಿದ್ದು, ಅದಕ್ಕೆ ಪಂಚ ಸಮಿತಿ ಮಾಡಿ ಪ್ರತಿದಿನ ಬೆಳಗ್ಗೆ ದುಶ್ಚಟ ಮಾಡಿದವರ ಮನೆಗೆ ಹೋಗಬೇಕು. ಆರೋಗ್ಯ, ಸಂಸಾರ, ಭೂಮಿ ಸಂಪತ್ತು ಹೀಗೆ ಅಪಾರ ರೀತಿಯಲ್ಲಿ ಹಾನಿಯಾಗುವ ಬಗ್ಗೆ ವ್ಯಸನಮುಕ್ತರಿಗೆ ಮನವರಿಕೆ ಮಾಡಿ ಚಟ ಬಿಡಿಸುವ ಕಾಯಕ ಮಾಡಿದಾಗ, ಅವರ ಕುಟುಂಬಕ್ಕೆ ಮಹಾಂತ ಜ್ಯೋತಿ ಬೆಳಗಿಸಿದಂತೆ ಆಗುತ್ತದೆ ಎಂದರು.

ಮರೆಗುದ್ದಿ ವಿರಕ್ತಮಠದ ಗುರುಮಹಾಂತ ಸ್ವಾಮಿಗಳು ಮಾತನಾಡಿ, ಸಂಪೂರ್ಣ ಬದುಕನ್ನು ಹಾಳು ಮಾಡಿಕೊಳ್ಳುವ ಮನುಷ್ಯ ಮಾಡುವ ದುಶ್ಚಟಗಳನ್ನು ಯಾವ ವಿಷಯುಕ್ತ ಪ್ರಾಣಿಗಳು ಸಹಿತ ಮೂಸಿಸುವುದಿಲ್ಲ. ಎಲ್ಲದರಲ್ಲೂ ಶೇಷ್ಠನಾದ ಮನುಷ್ಯ ಶರಣ, ಸಂತ, ಮಹಾಂತರ ಆದರ್ಶಗಳನ್ನು ರೂಢಿಸಿಕೊಂಡು ಆರೋಗ್ಯ ಸಿರಿ ಸಂಪತ್ತನ್ನು ರಕ್ಷಿಸಿಕೊಳ್ಳಬೇಕೆಂದರು.

ಡಾ. ಮಹಾಂತೇಶ ಕಡಪಟ್ಟಿ ಮಾತನಾಡಿ, ನಿತ್ಯ ಜೀವನದಲ್ಲೂ ಶರಣರ ಸಂದೇಶಗಳು ಮತ್ತು ಅವರು ನೀಡಿದ ವಚನಗಳನ್ನು ಮನನ ಮಾಡಿಕೊಂಡು ಕಾಯಕ ಮತ್ತು ಕಾಯವನ್ನು ಉಳಿಸಿಕೊಳ್ಳಬೇಕೆಂದರು. ಕಾರ್ಐಕ್ರಮದಲ್ಲಿ ಸಾಕಷ್ಟು ಜನರು ಸ್ವಯಂ ಪ್ರೇರಣೆಯಿಂದ ದುಶ್ಚಟಗಳನ್ನು ಜೋಳಿಗೆಗೆ ಹಾಕಿ ಮುಕ್ತರಾದರು. ಸಿದ್ದಣ್ಣ ಲಂಗೋಟಿ ಅನುಭಾವ ನೀಡಿದರು. ಅಂದಾನೆಪ್ಪ ಹವಾಲ್ದಾರ, ಬಸವರಾಜ ಕೆಂದೂರ, ಶಿವಪ್ಪ ನಾಗೂರ ಉಪಸ್ಥಿತರಿದ್ದರು. ಮಹಾಂತೇಶ ಹಿರೇಮಠ ನಿರೂಪಿಸಿ ವಂದಿಸಿದರು. ನೂರಾರು ಬಸವ ಭಕ್ತರು ಪಾಲ್ಗೊಂಡಿದ್ದರು.