ಹೊಸಪೇಟೆ ತಾಲೂಕಿನ ಕನ್ನಡ ವಿವಿ ಮಂಟಪ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಕಾರ್ಯಾಗಾರವನ್ನು ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮೀ ವಿ. ಉದ್ಘಾಟಿಸಿದರು. ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ, ಪ್ರಮುಖರಾದ ಡಾ.ಎಚ್.ಡಿ.ಪ್ರಶಾಂತ್, ಡಾ.ಜನಾರ್ದನ್, ಡಾ.ತಿಪ್ಪೇಸ್ವಾಮಿ ಎಚ್., ಮಂಜುಳಾ ಮಾಳ್ಗಿ, ಡಾ.ಗೀತಮ್ಮ ಕೆ. ಇದ್ದರು. 
ಜಿಲ್ಲೆ

ಅನಿಷ್ಟ ಆಚರಣೆಗಳು ತೊಲಗಲಿ: ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮೀ ವಿ. ಆಶಯ

Gangavati - Desk - Veeresh S Ullagaddi

ಹೊಸಪೇಟೆ: ಅನಿಷ್ಟ ದೇವದಾಸಿ ಪದ್ಧತಿ ಆಧುನಿಕ ಯುಗದಲ್ಲೂ ಜೀವಂತವಾಗಿರುವುದು ನಾಚಿಕೆಗೇಡಿನ ಸಂಗತಿ ಎಂದು ಡಾ.ಅಂಬೇಡ್ಕರ್ ಸಂಶೋಧನಾ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ ನಿರ್ದೇಶಕಿ ಡಾ.ಭಾಗ್ಯಲಕ್ಷ್ಮೀ ವಿ. ಬೇಸರ ವ್ಯಕ್ತಪಡಿಸಿದರು.


ಸಮಾಜ ಕಲ್ಯಾಣ ಇಲಾಖೆ, ವಿಎಸ್‌ಕೆ ವಿವಿಯ ಡಾ.ಬಾಬು ಜಗಜೀವನರಾಮ್ ಸಂಶೋಧನಾ ಸಂಸ್ಥೆ, ತಳಸಮುದಾಯಗಳ ಅಧ್ಯಯನ ಕೇಂದ್ರ ರಾಷ್ಟ್ರೀಯ ಕಾನೂನು ಶಾಲೆಯಿಂದ ಕನ್ನಡ ವಿಶ್ವವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದೇವದಾಸಿ ಪದ್ಧತಿ ನಿಷೇಧ ಕಾಯ್ದೆ ಮತ್ತು ಕಾನೂನುಗಳು ಮತ್ತು ದೇವದಾಸಿ ತಾಯಂದಿರು ವತ್ತು ಮಕ್ಕಳ ಪುನರ್ವಸತಿ ಮುಕ್ತ ಅವಲೋಕನ ಕುರಿತ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.


ಧಾರ್ಮಿಕ ಆಚರಣೆ ನೆಪದಲ್ಲಿ ಯುವತಿಯರನ್ನು ದೇವದಾಸಿ ಪದ್ಧತಿಗೆ ದೂಡುತ್ತಿರುವ ಪ್ರಕರಣಗಳು ಅಲ್ಲಲ್ಲಿ ಕಂಡು ಬರುತ್ತಿವೆ. ಇದರಿಂದ ಹೆಣ್ಣು ಮಕ್ಕಳ ಭವಿಷ್ಯ ಹಾಳಾಗುತ್ತಿದೆ.

ಅನಿಷ್ಟ ಆಚರಣೆಗಳ ನಿರ್ಮೂನೆ ಮತ್ತು ವಿಮುಕ್ತ ದೇವದಾಸಿಯರು, ಅವರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ಕೆಲಸಗಳು ಇನ್ನಷ್ಟು ಚುರುಕಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರತಿನಿಧಿಗಳು ಕೂಡಾ ಸಮಾಜಿಕ ಕಳಕಳಿ ತೋರಬೇಕು.

ತಳಸಮುದಾಯದಿಂದ ವಿದ್ಯಾವಂತರು ಅಧಿಕಾರಿಗಳಾಗಿ ಸಮುದಾಯದ ಬದಲಾವಣೆಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.


ಭಾರತ ವಿಶ್ವವಿದ್ಯಾಲಯದ ಕಾರ್ಯಾಗಾರದ ಸಂಯೋಜಕ ಡಾ.ಆರ್.ವಿ.ಚಂದ್ರಶೇಖರ ಮಾತನಾಡಿ, ದೇವದಾಸಿ ಪದ್ಧತಿ ನಿರ್ಮೂಲನೆ, ಪುನರ್ವಸತಿ ಕಲ್ಪಿಸುವ ವಿಚಾರದಲ್ಲಿ ಕೆಲ ಸ್ವಯಂ ಸೇವಾ ಸಂಸ್ಥೆಗಳು ತಪ್ಪು ಮಾಹಿತಿ ನೀಡಿ, ಪ್ರಚಾರ ಗಿಟ್ಟಿಸಿಕೊಳ್ಳುತ್ತಿವೆ. ಆದರೆ, ವಾಸ್ತವಾಂಶ ಬೇರೆಯಿದೆ.

ಈ ಬಗ್ಗೆ ಸರ್ಕಾರ ಮತ್ತು ಸಂಘ, ಸಂಸ್ಥೆಗಳು ಗಂಭೀರವಾಗಿ ಗಮನ ಹರಿಸಬೇಕು.

ದೇವದಾಸಿ ಮಹಿಳೆ ಯರ ಪುನರ್ವಸತಿ ಜತೆಗೆ ಅವರ ಕುಟುಂಬದ ಪುನರ್ವಸತಿಗೂ ಒತ್ತು ನೀಡಬೇಕು. ಅಂತರ್ಜಾತಿ ವಿವಾಹಕ್ಕೆ ನೀಡುವಂತೆ ದೇವದಾಸಿ ಮಕ್ಕಳ ಮದುವೆಗೆ ಪ್ರೋತ್ಸಾಹ ಧನ ನೀಡಬೇಕು.

ನ್ಯಾ.ನಾಗಮೋಹನದಾಸ್ ವರದಿಯಂತೆ ದೇವದಾಸಿಯರ ಅಭಿವೃದ್ಧಿ ನಿಗಮ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟರು. ಅಮ್ಮ ಫೌಂಡೇಷನ್‌ನ ಶೋಭಾ ಗಸ್ತಿ ಅಧ್ಯಕ್ಷತೆ ವಹಿಸಿದ್ದರು.