ಜಿಲ್ಲೆ

ತುಳುನಾಡಿನ ಸಂಸ್ಕೃತಿ, ಸಂಸ್ಕಾರ ಮರೆಯಬೇಡಿ...

ಪ್ರಶಾಂತ ಜಿ. ಭಾಗ್ವತ

ಸಮುದಾಯಕ್ಕೆ ಬಿ.ಜಯಕರ ಶೆಟ್ಟಿ ಇಂದ್ರಾಳಿ ಕರೆ

ತುಳುಕೂಟದಿಂದ ಆಟಿದ ತಿರ್ಲ್​ ಕಾರ್ಯಕ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ನಮ್ಮ ಹಿರಿಯರು ಮಳೆಗಾಲದ ಆಟಿ ತಿಂಗಳಲ್ಲಿ ತಿಂದುಣ್ಣಲೂ ಇಲ್ಲದೆ ತೀವ್ರ ಸಂಕಷ್ಟ ಅಭವಿಸುತಿದ್ದರು. ಆದರೆ, ಇಂದು ಆ ಪರಿಸ್ಥಿತಿ ಇಲ್ಲ. ನಾವೆಲ್ಲ ಸಾಕಷ್ಟು ಬದಲಾಗಿದ್ದೇವೆ. ಆದರೆ, ಸುಖದ ಹಾಗೂ ಆಧುನಿಕ ಜೀವನದಲ್ಲಿ ಮೈಮರೆತು ತುಳುನಾಡ ಸಂಸ್ಕಾರ, ಸಂಸ್ಕೃತಿ ಮರೆಯಬಾರದು. ಯುವಜನತೆ ನಮ್ಮ ಪರಂಪರೆಯನ್ನು ಮುನ್ನಡೆಸಬೇಕು ಎಂದು ಉಡುಪಿ ತುಳುಕೂಟದ ಅಧ್ಯಕ್ಷ ಬಿ.ಜಯಕರ ಶೆಟ್ಟಿ ಇಂದ್ರಾಳಿ ಸಲಹೆ ನೀಡಿದರು.

ಉಡುಪಿಯ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಉಡುಪಿ ತುಳುಕೂಟದ ವತಿಯಿಂದ ಹಾಗೂ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜುಲೈ 19ರಂದು ಆಯೋಜಿಸಿದ್ದ ಆಟಿದ ತಿರ್ಲ್​ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿರಿಯರ ಅಮೂಲ್ಯ ಜ್ಞಾನ

ಕರ್ನಾಟಕ ತುಳು ಅಕಾಡೆಮಿ ಮಾಜಿ ಸದಸ್ಯೆ ತಾರಾ ಆಚಾರ್ಯ ಮಾತನಾಡಿ, ಹಿರಿಯರು ನೀಡಿದ ಜ್ಞಾನವನ್ನು ನಾವೆಲ್ಲ ಮೂಢನಂಬಿಕೆ, ಅವೈಜ್ಞಾನಿಕತೆ ಹೆಸರಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದೇವೆ. ಅದರಿಂದಾಗಿ ಅಮೂಲ್ಯ ಜ್ಞಾನವನ್ನು ಕಳೆದುಕೊಂಡಿದ್ದೇವೆ. ಜಾಗತೀಕರಣದಿಂದ ಎಲ್ಲರ ಅನಾರೋಗ್ಯ ಹೆಚ್ಚಿದೆ. ಹಿರಿಯರು ಅನುಸರಿಸುತ್ತಿದ್ದ ಆಹಾರ ಪದ್ಧತಿಯಿಂದ ಮಾತ್ರ ಆರೋಗ್ಯ ಸರಿ ಇರುತ್ತದೆ ಎಂದರು.

ನಾಟಿವೈದ್ಯೆಗೆ ಸನ್ಮಾನ

ಹಿರಿಯ ನಾಟಿವೈದ್ಯೆ ಕಮಲಾ ದೆಂದೂರುಕಟ್ಟೆ ಅವರನ್ನು ಸನ್ಮಾನಿಸಲಾಯಿತು. ಬಳಿಕ ತೆಂಕನಿಡಿಯೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್​ನ ಶರಣ್ಯಾ, ಶಿರ್ವ ಎಂಎಸ್​ಆರ್​ಎಸ್​ ಕಾಲೇಜ್​ನ ಶ್ರೇಯಸ್​, ಅನೀಶಾ ಭಂಡಾರಿ, ಎಂಜಿಎಂ ಕಾಲೇಜಿನ ಕೃತಿ ಮೂಡಬೆಟ್ಟು, ವಿದ್ಯೋದಯ ಪ.ಪೂ. ಕಾಲೇಜಿನ ಭಾವನಾ, ನಿರಾಲಿ, ತ್ರಿಶಾ ಪಿಯು ಕಾಲೇಜಿನ ಅನ್ಯಾ ಆಚಾರ್ಯ ಆಟಿ ಸಂಸ್ಕೃತಿ ಕುರಿತು ಮಾತನಾಡಿದರು.

30ಕ್ಕೂ ಅಧಿಕ ತಿಂಡಿ-ತಿನಿಸು ಸಿದ್ಧಗೊಳಿಸಿ ತಂದಿದ್ದ ಮಹಿಳೆಯರನ್ನು ಗೌರವಿಸಲಾಯಿತು. ಉಡುಪಿ ತುಳುಕೂಟದ ಕಾರ್ಯದರ್ಶಿ ಗಂಗಾಧರ ಕಿದಿಯೂರು ಉಪಸ್ಥಿತರಿದ್ದರು.

ಜ್ಯೋತಿ ಎಸ್​. ದೇವಾಡಿಗ ಪ್ರಾರ್ಥಿಸಿದರು. ಕಾರ್ಯಕ್ರಮದ ಸಂಚಾಲಕಿ ತಾರಾ ಸತೀಶ ಸ್ವಾಗತಿಸಿದರು. ಯಶೋದಾ ಕೇಶವ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದ ಸಂಚಾಲಕಿ ಪೂರ್ಣಿಮಾ ಶೆಟ್ಟಿ ವಂದಿಸಿದರು.

ಮಳೆಗಾಲವೆಂದರೆ ಅನಾರೋಗ್ಯದ ಕಾಲ. ಅದಕ್ಕಾಗಿ ನಮ್ಮ ಹಿರಿಯರು ಪ್ರಕೃತಿಯಲ್ಲಿ ಸಿಗುತ್ತಿದ್ದ ಸೊಪ್ಪು, ಗೆಡ್ಡೆ ಬಳಸುತಿದ್ದರು. ಅದು ಆಹಾರವಷ್ಟೇ ಅಲ್ಲ, ಔಷಧವೂ ಆಗಿರುತಿತ್ತು. ನಮ್ಮ ಹಿರಿಯರು ಅನುಭವಿಸಿದ್ದ ಕಷ್ಟದ ದಿನಗಳನ್ನು ಹಾಗೂ ಆರೋಗ್ಯದ ಗುಟ್ಟನ್ನು ನಾವುಗಳು ಮರೆಯಬಾರದೆಂದು ಈ ಕಾರ್ಯಕ್ರಮ ಆಯೋಜಿಸಲಾಗಿದೆ. | ಬಿ.ಜಯಕರ ಶೆಟ್ಟಿ ಇಂದ್ರಾಳಿ. ಉಡುಪಿ ತುಳುಕೂಟದ ಅಧ್ಯಕ್ಷ