ಮೂಲ್ಕಿ: ಸಮಾಜ ಸಂಘಟನೆಗಳು ನಮ್ಮ ಧಾರ್ಮಿಕ, ಸಂಸ್ಕೃತಿ, ಪ್ರಾದೇಶಿಕ ಸಂಸ್ಕಾರ ಯುವ ಪೀಳಿಗೆಗೆ ಕಲಿಸುವ ಜತೆಗೆ ಸರ್ಕಾರದ ಯೋಜನೆಗಳನ್ನು ಸಮಾಜದ ದುರ್ಬಲ ವರ್ಗಗಳಿಗೆ ತಿಳಿಸುವ ಮೂಲಕ ಸಮಾಜ ಆರ್ಥಿಕ ಉನ್ನತಿಗಳಿಸಲು ಸಹಾಯಮಾಡಬೇಕು ಎಂದು ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಅಶೋಕ್‌ಕುಮಾರ್ ಶೆಟ್ಟಿ ಹೇಳಿದರು.
ದೇವಾಡಿಗ ಸಮಾಜ ಸೇವಾ ಸಂಘ, ಮಹಿಳಾ ಸಂಘಟನೆ, ಯುವಜನ ಸಂಘಟನೆ ವತಿಯಿಂದ ಭಾನುವಾರ ಸಂಘದ ಸಭಾಭವನದಲ್ಲಿ ಆಯೋಜಿಸಲಾದ ಆಟಿದ ಕೂಟ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಆಟಿದ ಕೂಟವನ್ನು ಚಿಕ್ಕಮಗಳೂರು ಕುವೆಂಪು ನಿಕೇತನ ಶಾಲೆಯ ದೈಹಿಕ ಶಿಕ್ಷಣ ನಿರ್ದೇಶಕ ಅಶೋಕ್ ಬಾಲಸುಬ್ರಹ್ಮಣ್ಯ ದೇವಾಡಿಗ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಬಗ್ಗೆ ಮಾಹಿತಿ ನೀಡುವ ಜತೆ ಆಟಿಯ ವೈಜ್ಞಾನಿಕ ಮತ್ತು ಔಷಧೀಯ ಮೌಲ್ಯಗಳ ಬಗ್ಗೆ ಯುವ ಜನತೆಗೆ ತಿಳಿಸಬೇಕು. ಜತೆಗೆ ಕ್ರೀಡಾ ಕ್ಷೇತ್ರದಲ್ಲಿ ಇರುವ ಅವಕಾಶಗಳ ಬಗ್ಗೆ ತಿಳಿದು ಮುಂದೆ ಬರಬೇಕು ಎಂದರು.
ಸಂಘದ ಅಧ್ಯಕ್ಷ ಬಿ.ಸಂಜೀವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು. ಮಂಗಳ ಸೊಸೈಟಿಯ ನಿವೃತ್ತ ಜನರಲ್ ಮ್ಯಾನೇಜರ್ ರೂಪಾ ಎಂ, ಸಂಘದ ಗೌರವಾಧ್ಯಕ್ಷ ನಾರಾಯಣ ದೇವಾಡಿಗ, ಸಲಹಾ ಸಮಿತಿಯ ದೊಡ್ಡಣ್ಣ ದೇವಾಡಿಗ, ಯುವಜನ ಸಂಘಟನೆಯ ಅಧ್ಯಕ್ಷ ಧನಂಜಯ ದೇವಾಡಿಗ ಪಂಜಿನಡ್ಕ, ಮಹಿಳಾ ಸಂಘಟನೆಯ ಅಧ್ಯಕ್ಷೆ ಶಾಂತಾ ದೇವಾಡಿಗ ಚಿತ್ರಾಪು ಮುಖ್ಯ ಅತಿಥಿಗಳಾಗಿದ್ದರು.
ಸಂಘದ ಪ್ರಧಾನ ಕಾರ್ಯದರ್ಶಿ ನಾಗರತ್ನಾ ಬಿ.ದೇವಾಡಿಗ ಸ್ವಾಗತಿಸಿದರು. ಉಪಾಧ್ಯಕ್ಷ ಗಣೇಶ್ ದೇವಾಡಿಗ ಕೋಟೆಕೇರಿ ವಂದಿಸಿದರು. ತನುಜಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿದರು.
ಸಮಾಜದ ಹಿರಿಯ ಸಾಧಕರಿಗೆ ಸನ್ಮಾನ
ಸಮಾಜದ ಹಿರಿಯರಾದ ಮುದ್ದಣ್ಣ ದೇವಾಡಿಗ ಚಿತ್ರಾಪು, ಸುಶೀಲಾ ದೇವಾಡಿಗ ಎಸ್‌ವಿಟಿ, ಬೇಬಿ ಲಕ್ಷ್ಮಣ ದೇವಾಡಿಗ ಕಾರ್ನಾಡು ಮತ್ತು ನಾಗರತ್ನ ದೇವಾಡಿಗ ಬಪ್ಪನಾಡು ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.95ಕ್ಕಿಂತ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರದೊಂದಿಗೆ ಗೌರವಿಸಲಾಯಿತು. ವಿವಿಧ ತಿಂಡಿ-ತಿನಿಸುಗಳ ಆಟಿದ ತಮ್ಮನ, ಸಾಂಸ್ಕೃತಿಕ ಕಾರ್ಯಕ್ರಮ ಆಟಿದ ನಲಿಕೆ ನಡೆಯಿತು.