ಕುಮಟಾ: ವೇದ ಕಾಲದಿಂದಲೂ ನದಿಗಳ ಮಹತ್ವವನ್ನು ವಿಶ್ವಕ್ಕೆ ಅರುಹಲಾಗಿದೆ. ನದಿಗಳು ಸಕಲ ಜೀವಜಂತುಗಳ ಜತೆಗೆ ಮನುಷ್ಯರ ಸ್ವಸ್ಥ ಸುಂದರ ಜೀವನವನ್ನು ಕೂಡಾ ರೂಪಿಸಿವೆ. ಇಂತಹ ನದಿಗಳಿಗೆ ಕೃತಜ್ಞತೆ ಸಲ್ಲಿಸುವ ಆರತಿ ಕಾರ್ಯಕ್ರಮಗಳು ಪ್ರತಿವರ್ಷ ನಡೆಯಬೇಕು ಹಾಗೂ ನದಿಗಳು ಸ್ವಚ್ಛಂದವಾಗಿ ಹರಿಯಬೇಕು ಎಂದು ಪರ್ತಗಾಳಿ ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ್ ಸ್ವಾಮೀಜಿ ನುಡಿದರು.
ಯುವಾ ಬ್ರಿಗೇಡ್ ವತಿಯಿಂದ ಭಾನುವಾರ ಅಘನಾಶಿನಿಯಲ್ಲಿ ಎರಡನೇ ವರ್ಷದ ಆರತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಅಘನಾಶಿನಿ ನದಿಯ ವೈಭವ ಮತ್ತು ವಿಶೇಷತೆ ಅಪ್ರತಿಮವಾದುದು. ಎಲ್ಲರ ಜನನ-ಮರಣದ ಸಾಕ್ಷೀಭೂತವಾಗಿರುವ ನದಿಗಳನ್ನು ಸಾಧ್ಯವಾದಷ್ಟು ಸ್ವಚ್ಛ ಮಾಡಿ ಆರತಿ ಬೆಳಗುವ ಹಬ್ಬವನ್ನು ಯುವಾ ಬ್ರಿಗೇಡ್ ಮಾಡುತ್ತಿದೆ. ವರ್ಷದಿಂದ ವರ್ಷಕ್ಕೆ ಸಂಭ್ರಮ ಮತ್ತು ಜನರ ಆಸ್ಥೆ ಹೆಚ್ಚಿದೆ ಎಂದರು.
ನಿವೃತ್ತ ಸೈನಿಕ ಹವಾಲ್ದಾರ್ ಮಹೇಶ ಮಾಸ್ತಿ ಹರಿಕಾಂತ, ದಿವಾಕರ ನಾಯ್ಕ, ಅಘನಾಶಿನಿ ನದಿ ಮತ್ತು ಹಾಗೂ ನದಿಪಾತ್ರದ ಜನ-ಜೀವನ ಕುರಿತು ಮಾತನಾಡಿದರು.
ಅಘನಾಶಿನಿ ಗ್ರಾಮದ ಮೂವರು ಕಲಾಪೋಷಕರು, ಏಳು ಶಿಲ್ಪಕಲಾವಿದರನ್ನು ಸನ್ಮಾನಿಸಲಾಯಿತು. ಬಳಿಕ ಯುವಾ ಬ್ರಿಗೇಡ್ ಸದಸ್ಯರಾದ ಸಚಿನ ಭಂಡಾರಿ, ಮಂಜುಗೌಡ ಗೌಡ, ಚಿದಂಬರ ಅಂಬಿಗ, ಯಮುನಾ ಅಂಬಿಗ, ಜ್ಯೋತಿ ನಾಯ್ಕ ಅವರು ಆಕರ್ಷಕ ರಂಗಸಜ್ಜಿಕೆಯಲ್ಲಿ ಅಘನಾಶಿನಿ ನದಿಗೆ ಆರತಿ ಸಮರ್ಪಿಸಿದರು. ಸಹಸ್ರಾರು ಮಂದಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡರು.