ಜಿಲ್ಲೆ

ಕ್ಯಾನ್ಸರ್ ಚಿಕಿತ್ಸೆಗೆ ಮಾದರಿಯಾದ ಕೆಸಿಟಿಆರ್ ಐ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ

Dharwada - Basavaraj Idli

ಹುಬ್ಬಳ್ಳಿ: ಕ್ಯಾನ್ಸರ್ ಚಿಕಿತ್ಸೆಯ ಆತ್ಯಾಧುನಿಕ ಸರ್ವ ಸೌಲಭ್ಯಗಳನ್ನು ಹೊಂದಿರುವ ಕರ್ನಾಟಕ ಕ್ಯಾನ್ಸರ್ ಥೆರಪಿ ಹಾಗೂ ರೀಸರ್ಚ್ ಇನ್ ಸ್ಟಿಟ್ಯೂಟ್ (ಕೆಸಿಟಿಆರ್ ಐ) ಮಾದರಿ ಚಿಕಿತ್ಸಾ ಕೇಂದ್ರವಾಗಿ ಹೊರಹೊಮ್ಮಿದೆ ಎಂದು ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿಯ ನವನಗರದ ಕೆಸಿಟಿಆರ್ ಐ ನಲ್ಲಿ ಗುರುವಾರ ರೋಟರಿ "ಆರೋಗ್ಯ ವಾಹಿನಿ' ಮೊಬೈಲ್ ಚಿಕಿತ್ಸಾ ವಾಹನ ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದಲ್ಲಿ ಆರೋಗ್ಯ ಸೇವೆ ಪಡೆದು ಗುಣಮುಖರಾಗುವವರ ಸಂಖ್ಯೆ ಕಡಿಮೆ. ಇದಕ್ಕೆ ಸುಸಜ್ಜಿತ ಸೌಲಭ್ಯಗಳ ಕೊರತೆಯೂ ಕಾರಣವಾಗಿದೆ. ಈ ದಿಸೆಯಲ್ಲಿ ಸರ್ಕಾರ ಉತ್ತರ ಕರ್ನಾಟಕ ಭಾಗಕ್ಕೆ ಅನುಕೂಲಗಳನ್ನು ಒದಗಿಸಬೇಕು. ತಾವು ಸಿಎಂ ಆಗಿದ್ದಾಗ 10 ಕೋಟಿ ರೂ. ಕ್ಯಾನ್ಸರ್ ಆಸ್ಪತ್ರೆಯ ಚಟುವಟಿಕೆಗಳಿಗೆ ನೀಡಿರುವುದಾಗಿ ಸ್ಮರಿಸಿದರು.

ಕೆಸಿಟಿಆರ್ ಐ ನಲ್ಲಿ ಅತ್ಯುತ್ತಮ ಚಿಕಿತ್ಸಾ ವ್ಯವಸ್ಥೆ ಇದ್ದು, ಇದನ್ನು ಕೇಂದ್ರವಾಗಿ ಇಟ್ಟುಕೊಂಡು ಸುತ್ತಮುತ್ತಲಿನ ಜಿಲ್ಲೆಗಳಿಗೂ ಕ್ಯಾನ್ಸರ್ ಚಿಕಿತ್ಸೆ ಲಭ್ಯವಾಗುವಂತೆ ಮಾಡಬೇಕು. 1.5 ಕೋಟಿ ರೂ. ವೆಚ್ಚದ ಮೊಬೈಲ್ ಚಿಕಿತ್ಸಾ ವಾಹನ ಜನರಿಗೆ ಸದುಪಯೋಗ ಆಗಬೇಕು. ಕ್ಯಾನ್ಸರ್ ಬಗ್ಗೆ ಇನ್ನಷ್ಟು ಸಂಶೋಧನೆಗಳು ಆಗಬೇಕಾಗಿದೆ ಎಂದರು.

ಕೆಸಿಟಿಆರ್ ಐ ಅಧ್ಯಕ್ಷ, ವಿಆರ್ ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಅವರು ಮಾತನಾಡಿ, ಐದು ದಶಕದ ಹಿಂದೆ ಕ್ಯಾನ್ಸರ್ ಚಿಕಿತ್ಸೆಗೆ ಅಡಿಪಾಯ ಹಾಕಿದ ಡಾ. ಆರ್.ಬಿ. ಪಾಟೀಲ ಅವರು ಈ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದರು. ಇದೀಗ ಅವರ ಹಾದಿಯಲ್ಲಿ ಸಾಗಿರುವ ಅವರ ಪುತ್ರ ಡಾ. ಬಿ.ಆರ್. ಪಾಟೀಲ ಇದನ್ನು ಮತ್ತಷ್ಟು ಬೆಳೆಸಿದ್ದಾರೆ. ಅವರ ಸಾಧನೆ ಗುರುತಿಸಿ ಲಂಡನ್ ಕಾಲೇಜ್ ಆಫ್ ಸರ್ಜನ್ ಫೆಲೋಶಿಪ್ ನೀಡಿದೆ ಎಂದು ಅಭಿನಂದಿಸಿದರು.

ಯಾವುದೇ ರೋಗ ಇರಲಿ ಆರಂಭದಲ್ಲಿ ಪತ್ತೆ ಮಾಡಿದರೆ ಗುಣಪಡಿಸುವುದು ಸುಲಭ. ಈ ದಿಸೆಯಲ್ಲಿ ಆರೋಗ್ಯವಾಹಿನಿಯು ಬಹಳ ಉಪಯುಕ್ತವಾಗಲಿದೆ. ಇದನ್ನು ದೇಣಿಗೆ ನೀಡಲು ಶ್ರಮಿಸಿದ ಎಲ್ಲ ದಾನಿಗಳ ಕಾರ್ಯ ಮೆಚ್ಚುವಂಥದ್ದು ಎಂದರು.

ರೋಟರಿ ಕ್ಲಬ್‌ನ ಸುರೇಂದ್ರ ಪೋರವಾಲ್ ಅವರು ಮಾತನಾಡಿ, ವಾಹಿನಿಯು ಜನರಿಗೆ ಅನುಕೂಲವಾಗಬೇಕು. ಬೇರೆ ಬೇರೆ ಜಿಲ್ಲೆಗಳಿಗೂ ಸೇವೆ ನೀಡಬೇಕು. ಇದಕ್ಕಾಗಿ ಕ್ಲಬ್ ಎಲ್ಲ ರೀತಿಯ ಬೆಂಬಲ ನೀಡಲಿದೆ ಎಂದರು.

ರಾಯಲ್ ಕಾಲೇಜ ಆಫ್ ಸರ್ಜನ್ ಫೆಲೋಶಿಪ್ ಪಡೆದ ವೈದ್ಯರತ್ನ ಡಾ. ಬಿ.ಆರ್. ಪಾಟೀಲ ಹಾಗೂ ಆರೋಗ್ಯ ವಾಹಿನಿಗೆ ದೇಣಿಗೆ ನೀಡಿದ ರೋಟರಿ ಕ್ಲಬ್ ಅಧ್ಯಕ್ಷ ಅರವಿಂದ ಕುಬಸದ, ಸುರೇಂದ್ರ ಪೋರವಾಲ್, ಟಾಟಾ ಮೋರ್ಟಸ್ ವಿತರಕ ಸಾರಂಗ ಶಾ ಇತರರನ್ನು ಸನ್ಮಾನಿಸಲಾಯಿತು.

ಡಾ. ಬಿ.ಆರ್. ಪಾಟೀಲ ಮಾತನಾಡಿ, ಉತ್ತರ ಕರ್ನಾಟಕ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಬೇಕಾದ ಸಕಲ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗಿದೆ. ಕ್ಯಾನ್ಸರ್ ಆರಂಭಿಕ ಹಂತದಲ್ಲಿ ಪತ್ತೆಯಾದರೆ ಶ್ರೀ ಗುಣಪಡಿಸಬಹುದು. ಈ ದಿಸೆಯಲ್ಲಿ ಆರೋಗ್ಯ ವಾಹಿನಿ ಜನರ ಮನೆ ಬಾಗಿಲಿಗೆ ಹೋಗಿ ತಪಾಸಣೆ ಮಾಡಲಿದೆ ಎಂದರು.

ರೋಟರಿ ಕ್ಲಬ್ ಹಾಗೂ ಇತರ ದಾನಿಗಳ ಸಹಕಾರದಿಂದ ವಾಹನ ಲಭ್ಯವಾಗಿದೆ. ಕಳೆದ ಒಂದೂವರೇ ತಿಂಗಳಲ್ಲಿ ವಿವಿಧೆಡೆ ಸಾವಿರಕ್ಕೂ ಹೆಚ್ಚು ಜನರ ತಪಾಸಣೆ ಮಾಡಲಾಗಿದೆ ಎಂದರು.

ಡಾ. ಯಳಮಲಿ, ಡಾ. ಉದಯ ಇಟಗಿ, ವೀರೇಂದ್ರ ಚೇಡಾ, ಹಿರೇಮಠ, ಅನಿತಾ ಪಾಟೀಲ, ಕಾರ್ಯದಶಿರ್ ಸುಭಾಸ ಬೆಂಬಳಗಿ, ಡಾ. ಉಮೇಶ ಹಳ್ಳಿಕೇರಿ, ಮಹಾಲಿಂಗಶೆಟ್ಟಿ ಪರಿವಾರದವರು, ಇತರರು ಇದ್ದರು.

ದೀಪಾ ವಾಡೇಕರ, ಐಶ್ವರ್ಯ ಪ್ರಾರ್ಥನೆ ಹಾಡಿದರು. ನಿರ್ದೇಶಕ ಮಹೇಂದ್ರ ಸಿಂಘಿ ಸ್ವಾಗತಿಸಿದರು. ಸಿಇಒ ವಿಲಾಸ ಜಿ. ವಂದಿಸಿದರು.